
ಬಾಳೆಕುದ್ರು ಸ್ವಾಮೀಜಿ ನಿಧನಕ್ಕೆ ಹೆಗ್ಗಡೆ ಸಂತಾಪ
Saturday, July 5, 2025
ಲೋಕಬಂಧು ನ್ಯೂಸ್, ಧರ್ಮಸ್ಥಳ
ಹಂಗಾರಕಟ್ಟೆ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.ಅವರು ತಮ್ಮ ಸಂತಾಪ ಸಂದೇಶದಲ್ಲಿ 'ಬಾಳೆಕುದ್ರು ಮಠದ ನೃಸಿಂಹಾಶ್ರಮ ಸ್ವಾಮೀಜಿ ನಿಧನರಾದ ವಿಚಾರ ತಿಳಿದು ದುಃಖವಾಯಿತು.
2006ರಿಂದ ಪೀಠಾಧಿಪತಿಗಳಾಗಿ ಸೇವೆ ಸಲ್ಲಿಸಿದ್ದ ಅವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೂ ಹಿಂದೊಮ್ಮೆ ಆಗಮಿಸಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು.
ಶ್ರೀಮಠವು ಸಾವಿರಾರು ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿದ್ದು ಶ್ರೀಗಳವರು ಸನಾತನ ಧರ್ಮದ ಅದ್ವೈತ ಸಂಪ್ರದಾಯದವರಾಗಿದ್ದ ಅವರಿಂದ ಅನೇಕ ಸದ್ಧರ್ಮ ಕಾರ್ಯಗಳು ನಡೆದಿವೆ.
ಶ್ರೀಮಠದ ಉತ್ತರಾಧಿಕಾರಿ, ಹಿರಿಯ ಶ್ರೀಗಳ ಹಾದಿಯಲ್ಲಿ ಸಾಗಿ ಸಮಾಜಮುಖಿ ಧರ್ಮ ಕಾರ್ಯಗಳನ್ನು ನಡೆಸುವಂತಾಗಲಿ ಎಂದು ಆಶಿಸುತ್ತಾ ಶ್ರೀಗಳ ಬ್ರಹ್ಮೈಕ್ಯರಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ' ಎಂದು ಡಾ.ಹೆಗ್ಗಡೆ ತಿಳಿಸಿದ್ದಾರೆ.