
ವೈದ್ಯರಿಗೂ ಐಎಎಸ್, ಐಪಿಎಸ್ ಸ್ಥಾನ
Sunday, July 6, 2025
ಲೋಕಬಂಧು ನ್ಯೂಸ್, ಉಡುಪಿ
ದೇಶದ ಅತ್ಯುನ್ನತ ಹುದ್ದೆಗಳಾದ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ನೀಡುವ ಸ್ಥಾನವನ್ನೇ ವೈದ್ಯರಿಗೆ ನೀಡಲಾಗುತ್ತಿದೆ. ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರ ಕಾಯಕವಾಗಿದ್ದು, ಅತ್ಯನ್ನತ ಹುದ್ದೆಗಳ ಸಾಲಿನಲ್ಲಿ ವೈದ್ಯ ವೃತ್ತಿ ಇದೆ ಎಂದು ಶಾಸಕ ಯಶಪಾಲ್ ಸುವರ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಆದರ್ಶ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆದರ್ಶ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಹಾಗೂ ಶಿಕ್ಷಣದಲ್ಲಿ ಉಡುಪಿ, ವಿಶ್ವವನ್ನೇ ಗೆದ್ದಿದೆ. 5 ವರ್ಷದ ಹಿಂದೆ ಕೋವಿಡ್ ಸಂದರ್ಭದಲ್ಲಿ ನಮ್ಮ ಜಿಲ್ಲೆಯ ಎಲ್ಲಾ ವೈದ್ಯರು ಜನರಿಗೆ ದಾರಿದೀಪವಾಗಿ ಧೈರ್ಯ ತುಂಬಿದ್ದಾರೆ.
ಜಿಲ್ಲೆಯಲ್ಲಿ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಶಿಸ್ತುಬದ್ಧವಾಗಿ ಆಚರಿಸಲಾಗುತ್ತಿದೆ. ಶಿಶು ಮರಣ ಪ್ರಮಾಣ ಕೂಡಾ ಶೂನ್ಯ ಪ್ರಮಾಣದಲ್ಲಿರುವುದು ಇಲ್ಲಿನ ವೈದ್ಯರ ಬದ್ಧತೆಯನ್ನು ತೋರಿಸಿಕೊಡುತ್ತದೆ ಎಂದರು.
ಶಿಕ್ಷಕರು ಹಾಗೂ ವೈದ್ಯರು ಸಂಬಳಕ್ಕೆ ದುಡಿಯುತ್ತಿಲ್ಲ. ಹಾಗಾಗಿಯೇ ಶಿಕ್ಷಣ ಹಾಗೂ ಆರೋಗ್ಯ ಸೇವೆಯಲ್ಲಿ ನಮ್ಮ ಜಿಲ್ಲೆ ಅಗ್ರಸ್ಥಾನದಲ್ಲಿದೆ ಎಂದು ಶಾಸಕ ಯಶಪಾಲ್ ಶ್ಲಾಘಿಸಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ವೈದ್ಯರನ್ನು ನಾವು ದೇವರ ಸ್ಥಾನದಲ್ಲಟ್ಟಿದ್ದೆವೆ. ಪ್ರಕೃತಿ ವಿಕಲ್ಪ, ಆಹಾರ ಪದ್ಧತಿಯಿಂದಾಗಿ ಸಮಾಜದಲ್ಲಿ ಸಮಸ್ಯೆಯಾಗುತ್ತಿದೆ. ಅದನ್ನು ಹೋಗಲಾಡಿಸುವ ಶಕ್ತಿ ವೈದ್ಯರಿಗೆ ಮಾತ್ರ ಇದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಹಬೀಬ್ ಗದ್ಯಾಳ್ ಶುಭ ಹಾರೈಸಿದರು.
ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್, ವೈದ್ಯರಿಗೆ ಮಾನವ ಸ್ಪರ್ಷ ಇರುವುದು ಮುಖ್ಯ. ಇಲ್ಲದಿದ್ದರೆ ಆತ ವೈದ್ಯನಾಗಿರುವುದು ವ್ಯರ್ಥ. ಪ್ರಸ್ತುತ ಅತ್ಯಾಧುನಿಕ ವೈದ್ಯಕೀಯ ಸೇವೆಗಳನ್ನು ಶೇ.20ರಷ್ಟು ಮಂದಿಗೆ ಮಾತ್ರ ಪಡೆಯಲು ಸಾಧ್ಯವಾಗುತ್ತಿದೆ. ಉಳಿದ 80 ಶೇ. ಜನರು ಉತ್ತಮ ಆರೋಗ್ಯ ಸೇವೆ ಪಡೆದುಕೊಳ್ಳಲಾಗುತ್ತಿಲ್ಲ. ಹಾಗಾಗಿ ಸರ್ಕಾರಗಳು ತಳ ಮಟ್ಟದವರಿಗೂ ಆರೋಗ್ಯ ಸೇವೆ ಸಿಗುವಂತಾಗಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉತ್ತಮ ಸೇವೆ ನೀಡಿದ ಹಿರಿಯ ವೈದ್ಯ ಫ್ರೊ. ಎನ್.ಆರ್.ರಾವ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀರಾಮ ರಾವ್, ಉಡುಪಿ ತಾಲೂಕು ವೈದ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಎನ್.ವಿ.ಬಿಡಿಸಿಪಿ ಅಧಿಕಾರಿ ಡಾ.ಪ್ರಶಾಂತ ಭಟ್, ಜನರಲ್ ಪ್ರಾಕ್ಟೀಷನರ್ ಬೈಲೂರು ಡಾ. ಶಶಿಕಿರಣ್ ಆಚಾರ್, ನೇತ್ರ ತಜ್ಞ ಡಾ.ಭವಾನಿಶಂಕರ್ ಪಡುಬಿದ್ರಿ ಅವರನ್ನು ಸನ್ಮಾನಿಸಲಾಯಿತು.
ಆದರ್ಶ ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್ ಇದ್ದರು. ಡಾ.ಪ್ರಶಾಂತ ಕುಮಾರ್ ಸ್ವಾಗತಿಸಿ, ವಂದಿಸಿದರು.