
Mangaluru: ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಸ್ಥಳಾಂತರವಿಲ್ಲ
Thursday, July 17, 2025
ಲೋಕಬಂಧು ನ್ಯೂಸ್, ಮಂಗಳೂರು
ಖಾಸಗಿ ರಂಗದ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್‌ನ ಪ್ರಧಾನ ಕಚೇರಿಯನ್ನು ಮಂಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಎಸ್. ಭಟ್ ಸ್ಪಷ್ಟಪಡಿಸಿದ್ದಾರೆ.
ಅಧಿಕಾರ ವಹಿಸಿಕೊಂಡ ಬಳಿಕ ಬುಧವಾರ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ಣಾಟಕ ಬ್ಯಾಂಕ್ ಸ್ಥಳಾಂತರ ಆಗುವುದಿಲ್ಲ. ಬ್ಯಾಂಕಿನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಬ್ಯಾಂಕ್ ಸದೃಢವಾಗಿದೆ. ಅಲ್ಲದೆ, ಬ್ಯಾಂಕ್ ವಿಲೀನ ಕುರಿತ ಸುದ್ದಿಗಳೂ ಸತ್ಯಕ್ಕೆ ದೂರವಾಗಿದೆ ಎಂದರು.
ಹಿಂದಿನ ಸಿಇಒ ಮತ್ತು ಎಂ.ಡಿ. ಅವರ ಅಧಿಕಾರಾವಧಿಯಲ್ಲಿ ಅವರ ಅನುಕೂಲ ಕಾರಣಕ್ಕೆ ಬೆಂಗಳೂರು ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿದ್ದಿರಬಹುದು. ಆದರೆ, ಬ್ಯಾಂಕಿನ ಪ್ರಧಾನ ಕಚೇರಿ ಇಲ್ಲಿಯೇ ಇದೆ. ಕರಾವಳಿಯಲ್ಲಿ ಸ್ಥಾಪನೆಯಾದ ಬ್ಯಾಂಕ್‌ನ ಪ್ರಧಾನ ಕಚೇರಿ ಇಲ್ಲಿಯೇ ಇರಲಿದೆ ಎಂದರು.