POCSO ವಿಶೇಷ ಪಿಪಿ ವಿರುದ್ಧದ ಪ್ರಕರಣಕ್ಕೆ ತಡೆಯಾಜ್ಞೆ
Thursday, July 17, 2025
ಲೋಕಬಂಧು ನ್ಯೂಸ್, ಉಡುಪಿ
ಜಿಲ್ಲೆಯ ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ಸೇರಿದಂತೆ ಮನೋಜ್ ಹಾಗೂ ಸಂಜಯ್ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣಕ್ಕೆ 15 ಗಂಟೆಯ ಅವಧಿಯಲ್ಲೇ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶಿಸಿದೆ.ಉಡುಪಿ ಮಹಿಳಾ ಠಾಣೆಯಲ್ಲಿ ಜು.15ರಂದು ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣವನ್ನು ಪ್ರಶ್ನಿಸಿ ವೈ.ಟಿ.ರಾಘವೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದರು.
ತುರ್ತು ವಿಚಾರಣೆ ನಡೆಸಿದ್ದ ನ್ಯಾ.ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಪೀಠ, ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶಿಸಿದೆ. ವೈ.ಟಿ. ರಾಘವೇಂದ್ರ ಪರವಾಗಿ ಹಿರಿಯ ವಕೀಲ ಪಿಪಿ ಹೆಗ್ಡೆ ವಾದಿಸಿದ್ದರು.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಪೋಕ್ಸೊ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ, ನಾನು ತಲೆಮರೆಸಿಕೊಂಡಿಲ್ಲ. ನನ್ನ ಕಚೇರಿಯಲ್ಲಿಯೇ ಇದ್ದೇನೆ. ಬಿಎನ್ಎಸ್ ಕಾಯ್ದೆ ಪ್ರಕಾರ 14 ದಿನಗಳ ಪ್ರಾಥಮಿಕ ತನಿಖೆ ನಡೆಸಿ ಪ್ರಕರಣ ದಾಖಲಿಸಬೇಕಿತ್ತು. ಪೋಲಿಸರು ಒತ್ತಡಕ್ಕೆ ಮಣಿದು ಏಕಾಏಕಿ ಪ್ರಕರಣ ದಾಖಲಿಸಿರುವುದು ಸಮಂಜಸವಲ್ಲ.
ಅಲ್ಲದೆ, ನನ್ನ ಕಚೇರಿಯಲ್ಲಿ ಕೆಲಸ ಬಿಟ್ಟು 8 ವರ್ಷದ ಬಳಿಕ ಅಂದು ಜಾತಿ ನಿಂದನೆ ಮಾಡಿದ್ದೇನೆ ಎಂದು ದೂರು ನೀಡಿದ್ದಾರೆ. ಇದೊಂದು ಸುಳ್ಳು ಪ್ರಕರಣ ಎಂದು ತಿಳಿಸಿದ್ದಾರೆ.