
Udupi: ಜು.25: ರಾಜ್ಯಪಾಲರಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ ಉದ್ಘಾಟನೆ
Wednesday, July 23, 2025
ಲೋಕಬಂಧು ನ್ಯೂಸ್, ಉಡುಪಿ
ಇಲ್ಲಿನ ಶ್ರೀಕೃಷ್ಣ ಮಠದ ಇತಿಹಾಸದಲ್ಲಿಯೇ ಮೊಟ್ಡಮೊದಲ ಬಾರಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವನ್ನು ಮಂಡಲ ಪರ್ಯಂತ (48 ದಿನಗಳ ಕಾಲ) ಆಚರಿಸಲಾಗುತ್ತಿದ್ದು, ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಆಶ್ರಯದಲ್ಲಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ದ್ವಿತೀಯಾರ್ಧದಲ್ಲಿ ಈ ಅಪೂರ್ವ ಕಾರ್ಯಕ್ರಮ ನಡೆಯಲಿದೆ.
ಆಗಸ್ಟ್ 1ರಿಂದ ಸೆಪ್ಟೆಂಬರ್ 17ರ ವರೆಗೆ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವವನ್ನು
ಜುಲೈ 25ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸುವರು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು.ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು,
ಕಳೆದ ಬಾರಿ ಶ್ರೀಕೃಷ್ಣ ಮಾಸೋತ್ಸವ ಎಂಬುದಾಗಿ ಒಂದು ತಿಂಗಳ ಪರ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿತ್ತು. ಈ ಬಾರಿ ಆ.15ರಂದು ಚಾಂದ್ರ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸೆ. 14ರಂದು ಸೌರ ಕೃಷ್ಣ ಜಯಂತಿ ಆಚರಿಸುವ ಮೂಲಕ ಶ್ರೀಕೃಷ್ಣ ಜಯಂತಿಯನ್ನು ಪರಿಪೂರ್ಣವಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದರು.
ಜು.25ರಂದು ಅಪರಾಹ್ನ 4.30 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಹಾಗೂ ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸುವರು.ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಯಶಪಾಲ್ ಸುವರ್ಣ ಮತ್ತು ಗುರ್ಮೆ ಸುರೇಶ ಶೆಟ್ಟಿ, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಉದ್ಯಮಿ ರಾಘವೇಂದ್ರ ರಾವ್ ಬೆಂಗಳೂರು, 'ಬೀಮ' ಸ್ವರ್ಣೋದ್ಯಮಿ ವಿಷ್ಣುಶರಣ್ ಬೆಂಗಳೂರು ಹಾಗೂ ಉದ್ಯಮಿ ಬಾಳೆಕುದ್ರು ರಾಮಚಂದ್ರ ಉಪಾಧ್ಯಾಯ ಆಗಮಿಸುವರು ಎಂದು ಮಠದ ದಿವಾನ ನಾಗರಾಜ ಆಚಾರ್ಯ ವಿವರಿಸಿದರು.
ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವವನ್ನು ಜ್ಞಾನ ಮಂಡಲೋತ್ಸವ (ಪ್ರವಚನ), ವೇಣು ಮಂಡಲೋತ್ಸವ (ಕೊಳಲು ವಾದನ), ಭಜನಾ ಮಂಡಲೋತ್ಸವ, ನೃತ್ಯ ಮಂಡಲೋತ್ಸವ ಹಾಗೂ ಸಾಂಸ್ಕೃತಿಕ ಮಂಡಲೋತ್ಸವ ಎಂಬುದಾಗಿ 48 ದಿನ ಆಚರಿಸಲಾಗುವುದು ಎಂದು ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ ಭಟ್ ಮಾಹಿತಿ ನೀಡಿದರು.
ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಮಠದ ವಿದೇಶ ವ್ಯವಹಾರಗಳ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ, ರವೀಂದ್ರ ಆಚಾರ್ಯ ಸುದ್ದಿಗೋಷ್ಟಿಯಲ್ಲಿದ್ದರು.