
Udupi: ಸೆ.12: ಭಾರತೀಯ ಜ್ಞಾನ ಪರಂಪರಾ ಅಂತಾರಾಷ್ಟ್ರೀಯ ಸಮ್ಮೇಳನ
Tuesday, September 9, 2025
ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ನಿಟ್ಟೆ ವಿ.ವಿ. ಭಾರತೀಯ ಜ್ಞಾನ ವ್ಯವಸ್ಥೆ (ಐಕೆಎಸ್) ಸಹಯೋಗದೊಂದಿಗೆ ಸೆ.12ರಂದು ಭಾರತೀಯ ಜ್ಞಾನ ಪರಂಪರೆಯ ಅಂತಾರಾಷ್ಟ್ರೀಯ ಸಮ್ಮೇಳನ ರಾಜಾಂಗಣದಲ್ಲಿ ನಡೆಯಲಿದೆ. ತತ್ವಶಾಸ್ತ್ರ ಸೇರಿದಂತೆ ಭಾರತೀಯ ವಿವಿಧ ಜ್ಞಾನಶಾಖೆಯ ಮೇಲೆ ಬೆಳಕುಚೆಲ್ಲುವ ಕಾರ್ಯಕ್ರಮ ಇದಾಗಿದೆ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸೋಮವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು ಮತ್ತು ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ಉಡುಪಿ ಸಹಭಾಗಿತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 25ಕ್ಕೂ ಹೆಚ್ಚು ಪ್ರಬಂಧ ಮಂಡನೆಯಾಗಲಿದೆ.
ಅಂದು ಬೆಳಿಗ್ಗೆ 9.30ಕ್ಕೆ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನಡೆಯುವ ಸಮ್ಮೇಳನದ ಅಧ್ಯಕ್ಷತೆಯನ್ನು ಮಠದ ಆಸ್ಥಾನ ವಿದ್ವಾಂಸ ಅಮೆರಿಕಾದ ಕೇಶವ ರಾವ್ ತಾಡಪತ್ರಿ ವಹಿಸುವರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ವಿನಯ್ ಹೆಗ್ಡೆ ಉದ್ಘಾಟಿಸುವರು. ನಿಟ್ಟೆ ವಿ.ವಿ. ಕುಲಪತಿ ಡಾ.ಎಂ.ಎಸ್. ಮೂಡಿತ್ತಾಯ, ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಹಲ್ಯಾ ಎಸ್., `ಬ್ರಹ್ಮೋಸ್' ವಿಜ್ಞಾನಿ ಪದ್ಮಶ್ರೀ ಡಾ. ಪ್ರಹ್ಲಾದ ರಾಮ ರಾವ್, ಹಿರಿಯ ವಿದ್ವಾಂಸರಾದ ಪ್ರೊ. ಶ್ರೀಪತಿ ತಂತ್ರಿ, ಗೋಪೀನಾಥಾಚಾರ್ ಗಲಗಲಿ, ಡಾ.ಸುದರ್ಶನ ಮೂರ್ತಿ, ಡಾ. ಲಕ್ಷ್ಮೀ ಮೂರ್ತಿ ಮೊದಲಾದವರು ಭಾಗವಹಿಸುವರು. ವಿವಿಧ ವಿಚಾರಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ.
ಸಮ್ಮೇಳನ ಸಂಯೋಜಕ, ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ, ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥೆ ನಿರ್ದೇಶಕ ಡಾ.ಸುಧೀರ್ ರಾಜ್ ಕೆ. ಮತ್ತು ಎಂ.ಬಿ.ಎ. ನಿರ್ದೇಶಕ ಸುಧೀರ್ ರಾವ್, ವಾದಿರಾಜ ಸಂಶೋಧನ ಕೇಂದ್ರ ನಿರ್ದೇಶಕ ಡಾ. ಗೋಪಾಲಾಚಾರ್ ಸುದ್ದಿಗೋಷ್ಟಿಯಲ್ಲಿದ್ದರು.