ಲೋಕಬಂಧು ನ್ಯೂಸ್ | ಉಡುಪಿ, ಮೇ 24
ಸಮಯದ ಕೊರತೆಯನ್ನು ಅನುಭವಿಸುತ್ತಿರುವ ಇಂದಿನ ಜನಾಂಗಕ್ಕೆ ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಅಲ್ಪಾವಧಿಯಲ್ಲಿ ಅಪಾರ ಸಾಧನೆಯ ಬದುಕು ಕಟ್ಟಿಕೊಳ್ಳುವ ಮಾರ್ಗ ಸೂಚಿಸಿದ್ದಾನೆ ಎಂದು ಶೀರೂರು ಮಠದ ವಿದ್ವಾನ್ ರಾಧೇಶ ಆಚಾರ್ಯ ಹೇಳಿದರು.
ಪರ್ಯಾಯ ಶೀರೂರು ಶ್ರೀಕೃಷ್ಣಮಠ ಆಶ್ರಯದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಭಾನುವಾರ ರಾಜಾಂಗಣದಲ್ಲಿ ನಡೆದ ಭಗವದ್ಗೀತೆ- ಒಂದು ವಿಶ್ಲೇಷಣೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒತ್ತಡದ ಬದುಕಿನಲ್ಲಿ ಸಮಯದ ಕೊರತೆ ಕಾಡುತ್ತಿದ್ದು ಅದರ ನಿವಾರಣೆಗೆ ಸಾಹಿತ್ಯಾಸಕ್ತರು ಚುಟುಕು ಸಾಹಿತ್ಯವನ್ನು ಅಳವಡಿಸಿಕೊಳ್ಳಬೇಕಾಗಿದೆ. ಚುಟುಕು ಸಾಹಿತ್ಯಕ್ಕೆ ಗೀತೆಯೇ ಮೂಲ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳೂರಿನ ಡಾ. ಸುರೇಶ ನೆಗಳಗುಳಿ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಚಿಂತಕರಾದ ಶಿರಸಿಯ ಗಣಪತಿ ಭಟ್ಟ ವರ್ಗೇಸರ ಮತ್ತು ಕೋಲ್ಚಪ್ರ ಗೋವಿಂದ ಭಟ್ಟ ಉಪನ್ಯಾಸ ನೀಡಿದರು.
ಕಚುಸಾಪ ಕೇಂದ್ರ ಸಮಿತಿ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾಧ್ಯಕ್ಷ ಪ್ರೊ. ಜಿ.ವಿ. ನಾಯಕ ಸ್ವಾಗತಿಸಿದರು. ಗ್ರಾಮೀಣ ಘಟಕ ಅಧ್ಯಕ್ಷ ರಾಜು ಎನ್. ಆಚಾರ್ಯ ಪರಿಚಯಿಸಿದರು.
ಮಂಗಳೂರು ಘಟಕದ ಜಯಾನಂದ ಪೆರಾಜೆ, ಡಾ.ಶಾಂತಾ ಪುತ್ತೂರು. ರೇಖಾ ಸುದೀಪ ರಾವ್, ಸೋಮಶೇಖರ ಶೆಟ್ಟಿ, ಡಾ.ಸಿದ್ದಕುಮಾರ ಘಂಟಿ, ಶೇಖರ ಗೌಡ ಪಾಟೀಲ, ಶ್ರೀಕಾಂತ ಕೆ.ವಿ. ಮೊದಲಾದವರಿದ್ದರು.
ನಂತರ ಕಾಸರಗೋಡು ಗಡಿನಾಡು ಸಾಂಸ್ಕೃತಿಕ ಕಲಾ ತಂಡದ ಡಾ.ವಾಣಿಶ್ರೀ ಕಾಸರಗೋಡು ಅವರಿಂದ ಜಾನಪದ ನೃತ್ಯ ವೈಭವ ನಡೆಯಿತು.
