ಏ.3-7: ಇಂದ್ರಾಣಿ ಶ್ರೀ ಮುಖ್ಯಪ್ರಾಣ ಮತ್ತು ನಾಗದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಲೋಕಬಂಧು ನ್ಯೂಸ್ | ಉಡುಪಿ, ಏ.1
ಇಂದ್ರಾಣಿ ಶ್ರೀ ಪಂಚದುರ್ಗಾಪರಮೇಶ್ವರಿ ದೇವಾಲಯಕ್ಕೆ ಹೊಂದಿಕೊಂಡಿರುವ ಸುಮಾರು 800 ವರ್ಷಗಳ ಇತಿಹಾಸವಿರುವ ಸುಂದರ ಕಾನನದ ನಡುವೆ ಮೈದಳೆದಿರುವ ಇಂದ್ರಾಣಿ ತೀರ್ಥದ ಉಗಮ ಸ್ಥಾನದಲ್ಲಿರುವ ಶ್ರೀ ಆಂಜನೇಯ ಮತ್ತು ಶ್ರೀ ನಾಗದೇವರ ಪುನಃಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಏ.3ರಿಂದ 7ರ ವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ನೂರಾರು ವರ್ಷಗಳ ಹಿಂದೆ ಇಲ್ಲಿ ಮಠ ಪರಂಪರೆಯ ಸ್ವಾಮಿಗಳಿಂದ ಆಂಜನೇಯ ದೇವರ ಪ್ರತಿಷ್ಠೆಯಾಗಿದೆ ಎಂದು ತಿಳಿದುಬಂದಿದೆ.


ಶಿಥಿಲಾವಸ್ಥೆಯಲ್ಲಿದ್ದ ಶ್ರೀ ಆಂಜನೇಯ ದೇವರ ಗುಡಿಯನ್ನು ಜೀರ್ಣೋದ್ಧಾರ ಮಾಡುವ ಬಗ್ಗೆ 2024ರಲ್ಲಿ ನಿರ್ಧರಿಸಿ, ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಪ್ರಾಯಶ್ಚಿತ್ತಾದಿ ಪರಿಹಾರಗಳನ್ನು ಪೂರೈಸಿ ಸುಮಾರು 3 ಕೋ. ರೂ. ವೆಚ್ಚದಲ್ಲಿ ದೇವರ ಸುಂದರ ಶಿಲಾಮಯ ಗುಡಿಯನ್ನು ಪ್ರಕೃತಿ ಸೌಂದರ್ಯ ಉಳಿಸಿಕೊಂಡು ನಿರ್ಮಿಸಲಾಗಿದೆ.


ಏ.3ರಿಂದ 7ರ ರವರೆಗೆ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ವೈದಿಕ, ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಏ.3ರಂದು ಸಂಜೆ 6ರಿಂದ ವಾಸ್ತುಪೂಜೆ, ವಾಸ್ತುಬಲಿ, ಬಿಂಬಾಧಿವಾಸ ಪೂಜಾದಿಗಳು ನೆರವೇರಲಿದೆ. ಏ.4ರಂದು ಬೆಳಿಗ್ಗೆ 6-48ರಿಂದ ಅಷ್ಟಬಂಧ ಸಹಿತ ಶ್ರೀ ಮುಖ್ಯಪ್ರಾಣ ದೇವರ ಪ್ರತಿಷ್ಠೆ ನಡೆಯಲಿದ್ದು ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನೆರವೇರಲಿದೆ. ಏ.5ರಂದು ಶ್ರೀ ಮುಖ್ಯಪ್ರಾಣ ದೇವರಿಗೆ ಬ್ರಹ್ಮಕುಂಭಾಭಿಷೇಕ, ಪ್ರಸನ್ನ ಪೂಜೆ, ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ 7ರಿಂದ ಮಹಾರಂಗ ಪೂಜೆ ಜರುಗಲಿದೆ.


ಏ.6ರಂದು ಸಂಜೆ 6ರಿಂದ ನಾಗಗುಡಿಯಲ್ಲಿ ವಾಸ್ತುರಕ್ಷಾಹೋಮ, ಬಿಂಬಾಧಿವಾಸ ಪೂಜಾದಿಗಳು ನೆರವೇರಲಿದ್ದು ಏ.7ರಂದು ನಾಗದೇವರ ಪುನಃಪ್ರತಿಷ್ಠಾದಿಗಳು, ಆಶ್ಲೇಷಾ ಬಲಿ, ಮಹಾಪೂಜೆ, ವಟು ಆರಾಧನೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ ನೆರವೇರಲಿದೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ವಿವರಿಸಿದರು.


ಯತಿಗಳು ಭಾಗಿ
ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರರಿಂದ ಏ.1ರಂದು ಸಂಜೆ ಹೊರೆಕಾಣಿಕೆ ಶೋಭಾ ಯಾತ್ರೆಗೆ ಚಾಲನೆ ನಡೆಯಲಿದೆ. ಉಡುಪಿ ಅಷ್ಟಮಠಗಳ ಯತಿಗಳಾದ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮತ್ತು ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹಾಗೂ ಸುಬ್ರಹ್ಮಣ್ಯ‌ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಮತ್ತು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಭಾಗವಹಿಸುವರು ಎಂದರು.


ಸಾಂಸ್ಕೃತಿಕ ವೈವಿಧ್ಯ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಏ.4ರಂದು ರಾತ್ರಿ 7.30ರಿಂದ ಕಲಾಮಯಂ ಉಡುಪಿ ಅವರಿಂದ ಜನಪದ ಕಲರವ, 5ರಂದು ರಾತ್ರಿ 7.30ರಿಂದ ಪಾವಂಜೆ ಮೇಳದವರಿಂದ ಯಕ್ಷಗಾನ, 6ರಂದು ಗುರುವಸಂತಿ ಸಾಂಸ್ಕೃತಿಕ ವೇದಿಕೆ ಮಣಿಪಾಲ ಕಲಾವಿದರಿಂದ ಪೌರಾಣಿಕ ನಾಟಕ, 7ರಂದು ಶ್ರೀ ಯಕ್ಷನಿಧಿ ಮೂಡುಬಿದಿರೆ ಅವರಿಂದ ಯಕ್ಷಗಾನ ನಡೆಯಲಿದೆ. ಜೊತೆಗೆ 5 ದಿನಗಳಲ್ಲಿ ನೃತ್ಯ ವೈಭವ, ಭಜನಾಮೃತಂ, ಭಕ್ತಿ ಸಂಗೀತ, ತಾಳಮದ್ದಲೆ ಕೂಟ, ಭಕ್ತಿಗಾನ, ನೃತ್ಯಾಮೃತಂ, ನಿರಂತರ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಜಯಕರ ಶೆಟ್ಟಿ ತಿಳಿಸಿದರು.


ಲೋಕ ಕಲ್ಯಾಣ ಹಾಗೂ ಭಗವದ್ಭಕ್ತರ ಇಷ್ಟಾರ್ಥ ಈಡೇರಿಕೆಗಾಗಿ ಹನುಮಾನ್ ಚಾಲೀಸಾ ಲೇಖನ ಯಜ್ಞ ಆರಂಭವಾಗಿದ್ದು ಭಕ್ತರು ಹನುಮಾನ್ ಚಾಲೀಸಾ ಪುಸ್ತಕವನ್ನು ಮನೆಗೆ ಕೊಂಡೊಯ್ದು ಪೂಜಾ ಸ್ಥಳದಲ್ಲಿ ಬರೆದು ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಬಳಿಕ ದೇವಳಕ್ಕೆ ತಂದು ಒಂದು ಬಾರಿ ಹನುಮಾನ್ ಚಾಲೀಸಾ ಪಠಿಸಿ ದೇವರಿಗೆ ಅರ್ಪಿಸಬೇಕು ಎಂದರು.


ಸುದ್ದಿಗೋಷ್ಟಿಯಲ್ಲಿ ಶ್ರೀ ಮುಖ್ಯಪ್ರಾಣ ದೇವರ ಗುಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ ಇಂದ್ರಾಳಿ, ಇಂದ್ರಾಣಿ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಕುಶಲ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಇಂದ್ರಾಳಿ, ಕೋಶಾಧಿಕಾರಿ ರತ್ನಾಕರ್ ಶೆಟ್ಟಿ ಬುಡ್ನಾರು, ಪದಾಧಿಕಾರಿಗಳಾದ ಸಾಧು ಶೆಟ್ಟಿ, ಸೀತಾರಾಮ ನಾಯಕ್ ಮೊದಲಾದವರಿದ್ದರು.