ಲೋಕಬಂಧು ನ್ಯೂಸ್ ಉಡುಪಿ, ಏ.13
ಸುಮಾರು 800 ವರ್ಷಕ್ಕಿಂತಲೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವೈಭವ ಕಾರ್ಯಕ್ರಮ ಶ್ರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಸಹಯೋಗದೊಂದಿಗೆ ಈ ತಿಂಗಳ 16ರಿಂದ 20ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಹೋತ್ಸವದ ಪೂರ್ವಭಾವಿಯಾಗಿ ಏ.15ರಂದು ಅಪರಾಹ್ನ 3 ಗಂಟೆಗೆ ನಗರದ ಜೋಡುಕಟ್ಟೆಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ದೇವಳದ ಆಡಳಿತ ಸಮಿತಿ ಅಧ್ಯಕ್ಷ ಮಾಧವ ಬನ್ನಂಜೆ ತಿಳಿಸಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಖರ ಮತ್ತು ರಟ್ಟರೆಂಬ ಶಿವಭಕ್ತರಿಂದ ಬನ್ನಂಜೆ ದೇವಳ ಸ್ಥಾಪನೆಯಾಯಿತೆಂದೂ ಉಡುಪಿ ಶ್ರೀಕೃಷ್ಣನ ಪ್ರತಿಮೆಯನ್ನು ಆಚಾರ್ಯ ಮಧ್ವರು ಮಲ್ಪೆಯಿಂದ ಉಡುಪಿಗೆ ತರುವಾಗ ದಾರಿಮಧ್ಯೆ `ತಾಳೆಕುಡೆ' ಎಂಬ ಹೆಸರಿನ ಈ ದೇವಸ್ಥಾನದಲ್ಲಿ ಪೂಜಿಸಿದ್ದರೆಂಬ ಐತಿಹ್ಯವಿದೆ. ಸುಮಾರು 9ನೇ ಶತಮಾನದಲ್ಲಿ ಆಳುಪ ದೊರೆಗಳಿಂದ ಜೀರ್ಣೋದ್ಧಾರವಾಗಿರುವ ಬಗ್ಗೆ ಇತಿಹಾಸಕಾರ ಪಾದೂರು ಡಾ.ಗುರುರಾಜ ಭಟ್ ಅಭಿಪ್ರಾಯಪಟ್ಟಿದ್ದಾರೆ ಎಂದರು.
ಉಡುಪಿಯ ಅಂಬಲಪಾಡಿ ಮೂಡು-ಪಡು, ಕಪ್ಪೆಟ್ಟು, ಕಿದಿಯೂರು, ಕಡೆಕಾರು, ಕನ್ನರ್ಪಾಡಿ, ನಿಡಂಬೂರು ಮತ್ತು ಕುತ್ಪಾಡಿ ಗ್ರಾಮಗಳಿಗೆ ಸೇರಿದ ಎಂಟು ಗ್ರಾಮಗಳ ಮಾಗಣೆ ದೇವರೆಂದೂ ಇತಿಹಾಸವಿದೆ. ಸುಮಾರು 12 ವರ್ಷಗಳ ಬಳಿಕ ಇದೀಗ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ನಾಡೋಜ ಡಾ.ಜಿ.ಶಂಕರ್ ನೇತೃತ್ವದ ಸಮಿತಿ ಹಾಗೂ ಆಡಳಿತ ಮಂಡಳಿ ಸಹಕಾರದೊಂದಿಗೆ ನಡೆಯಲಿದೆ ಎಂದರು.
ಮಹೋತ್ಸದ ಸಂದರ್ಭದಲ್ಲಿ ದೇವಳಕ್ಕೆ ಹೊಂದಿಕೊಂಡಿರುವ ಸುಮಾರು 36 ಸೆಂಟ್ಸ್ ಸ್ಥಳವನ್ನು ಖರೀದಿಸಲಿದ್ದು, ಅದಕ್ಕಾಗಿ ಭೂದಾನ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದವರು ವಿವರಿಸಿದರು.
ಏ.16ರಿಂದ ಪ್ರತಿದಿನ ಸಂಜೆ 4ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಮಾಜದ ವಿವಿಧ ಗಣ್ಯರು ಭಾಗವಹಿಸುವರು ಎಂದು ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಮೇಶ ಕಾಂಚನ್ ತಿಳಿಸಿದರು.
ಏ.20ರಂದು ಬೆಳಿಗ್ಗೆ 9.15 ಗಂಟೆ ಸುಮುಹೂರ್ತದಲ್ಲಿ ಬ್ರಹ್ಮಕುಂಭಾಭಿಷೇಕ ನಡೆಯಲಿದೆ ಎಂದು ಕ್ಷೇತ್ರದ ತಂತ್ರಿ ಶಶಿಕಾಂತ ತಂತ್ರಿ ತಿಳಿಸಿದರು.
ದೇವಳದ ಪ್ರಧಾನ ಅರ್ಚಕ ವಾಸುದೇವ ಉಪಾಧ್ಯಾಯ, ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿನೇಶ ಪುತ್ರನ್, ಪ್ರಭಾಕರ ಶೆಟ್ಟಿ, ಶೇಖರ ಶೆಟ್ಟಿ, ಸುದೇಶ ಶೇಟ್, ರಾಜೇಶ್ ಬಿ., ವಿದ್ಯಾಲತಾ ಯು.ಶೆಟ್ಟಿ, ಶಮಿತಾ ಎಸ್. ಭಂಡಾರಿ ಇದ್ದರು.
ಬ್ರಹ್ಮಕಲಶೋತ್ಸವ ಕಾರ್ಯಕ್ರಮ
ಏ.15ರಂದು ಅಪರಾಹ್ನ 3 ಗಂಟೆಯಿಂದ ಹೊರೆಕಾಣಿಕೆ
ಏ.16ರಂದು ಧಾರ್ಮಿಕ ಕಾರ್ಯಕ್ರಮ ಹಾಗೂ ಶಿವಪ್ರೇರಣ ಸಹಸ್ರ ಕಂಠ ಗಾಯನ
ಏ.17ರಂದು ಧಾರ್ಮಿಕ ಕಾರ್ಯಕ್ರಮ, ನೃತ್ಯೋಮ್ ಮತ್ತು 'ಶಿವದೂತ ಗುಳಿಗ' ನಾಟಕ
ಏ.18ರಂದು ಧಾರ್ಮಿಕ ಕಾರ್ಯಕ್ರಮ, ಶಿವಪ್ರೇರಣಾ ಚಿತ್ರಕಲಾ ಸ್ಪರ್ಧೆ, ಶಿವನಾದಾರ್ಪಣಂ ಸ್ಯಾಕ್ಸೊಫೋನ್ ವಾದನ ಹಾಗೂ ನೃತ್ಯ
ಏ.19ರಂದು ಧಾರ್ಮಿಕ ಕಾರ್ಯಕ್ರಮ, ಮದರಂಗಿ ಮತ್ತು ರಂಗೋಲಿ ಸ್ಪರ್ಧೆ, ವೀಣಾನಾದೋತ್ಸವ, ನವೋದಯ ಸಂಘದಿಂದ ವೈವಿಧ್ಯಮಯ ಕಾರ್ಯಕ್ರಮ
ಏ.20ರಂದು ಧಾರ್ಮಿಕ ಕಾರ್ಯಕ್ರಮ, ಭಕ್ತಿ ರಸಮಂಜರಿ, ಭಕ್ತಿ ಸಂಗೀತ ಮತ್ತು 'ಶಿವಸಂಕಲ್ಪ' ಯಕ್ಷಗಾನ ಪ್ರದರ್ಶನ
