ಲೋಕಬಂಧು ನ್ಯೂಸ್ ಉಡುಪಿ, ಜೂ. 7
ಪ್ರತಿದಿನ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ಸ್ಲೋ ಪಾಯ್ಸನ್ ನೀಡುತ್ತಿದೆ. ಅಧಿಕಾರಕ್ಕೆ ಬರುವ ಮೊದಲು ಅಚ್ಚೇ ದಿನ್ ನೀಡುವುದಾಗಿ ದೇಶದ ಜನತೆಗೆ ಭರವಸೆ ನೀಡಿದ್ದ ಮೋದಿ, ಅಧಿಕಾರಕ್ಕೆ ಬಂದ ಬಳಿಕ ದಿನಂಪ್ರತಿ ಬೆಲೆ ಏರಿಕೆ ಮಾಡುವ ಮೂಲಕ ದೇಶದ ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅದಾನಿ, ಅಂಬಾನಿ ಹಿತಾಸಕ್ತಿಗಾಗಿ ದೇಶದ ಜನರ ಬದುಕು ದುಸ್ತರಗೊಳ್ಳುವಂತೆ ಮಾಡುತ್ತಿದ್ದಾರೆ. ಪ್ರತಿ ದಿನ ಸ್ವಲ್ಪ ಸ್ವಲ್ಪವೇ ಬೆಲೆ ಏರಿಕೆ ಮಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತಂತ್ರಗಾರಿಕೆ ಜನರಿಗೆ ಸ್ಲೋ ಪಾಯ್ಸನ್ ನೀಡುವ ಕ್ರಿಮಿನಲ್ ಮನಃಸ್ಥಿತಿಯಾಗಿದೆ. ವ್ಯಕ್ತಿಗೆ ತಿಳಿಯದಂತೆ ಪ್ರತಿ ನಿತ್ಯ ಸ್ವಲ್ಪ ಸ್ವಲ್ಪವೇ ವಿಷ ನೀಡಿ ವ್ಯಕ್ತಿಯ ಅಂಗಾಂಗ ವೈಫಲ್ಯವನ್ನು ಮಾಡಿ ಕೊನೆಗೆ ಆ ವ್ಯಕ್ತಿಯನ್ನು ಸಾಯಿಸುವುದೇ ವಿಷ ನೀಡುವಾತನ ಉದ್ದೇಶ. ಪ್ರಸ್ತುತ ಕೇಂದ್ರ ಬಿಜೆಪಿ ಸರ್ಕಾರ ಕೂಡಾ ಇಂಥದೇ ಕ್ರಿಮಿನಲ್ ಮನಃಸ್ಥಿತಿ ಹೊಂದಿದ್ದು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆಯನ್ನು ದಿನಂಪ್ರತಿ ಸ್ವಲ್ಪ ಸ್ವಲ್ಪವೇ ಏರಿಕೆ ಮಾಡಿ ದೇಶದ ಜನರನ್ನು ಆರ್ಥಿಕವಾಗಿ ಸಾಯಿಸುತ್ತಿದೆ.
ಕಚ್ಚಾ ತೈಲದ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇಳಿಕೆಯಾದರೂ ಮಧ್ಯಪ್ರಾಚ್ಯದ ಯುದ್ದದ ನೆಪ ಮುಂದಿಟ್ಟುಕೊಂಡು ದೇಶದಲ್ಲಿ ದಿನನಿತ್ಯ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರ ಏರಿಕೆ ಮಾಡಿ ಜನರ ಲೂಟಿ ಹೊಡೆಯಲಾಗುತ್ತಿದೆ. ಮೋದಿ ಸರ್ಕಾರದ ಸ್ಲೋ ಪಾಯ್ಸನ್ ನೀಡುವ ತಂತ್ರಗಾರಿಕೆ ದೇಶದ ಜನತೆಗೆ ಇದೀಗ ಅರ್ಥವಾಗುತ್ತಿದ್ದು ಕೇಂದ್ರದ ಬಿಜೆಪಿ ಸರ್ಕಾರ ಜನಾಕ್ರೋಶಕ್ಕೆ ಬಲಿಯಾಗಲಿದೆ ಎಂದು ಕಾಂಚನ್ ಎಚ್ಚರಿಸಿದ್ದಾರೆ.