.jpg)
Onake Obavva: ಒನಕೆ ಓಬವ್ವ ವಿಚಾರಧಾರೆ ಅಳವಡಿಸಿಕೊಳ್ಳಲು ಕರೆ
Saturday, November 11, 2023
ಉಡುಪಿ, ನ.11 (ಲೋಕಬಂಧು ವಾರ್ತೆ): ಒನಕೆ ಓಬವ್ವ ಜಯಂತಿ ಆಚರಣೆ ಮೂಲಕ ಅವರ ಶೌರ್ಯ, ಸಾಹಸ ಹಾಗೂ ವಿಚಾರಧಾರೆಗಳನ್ನು ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಶಾಸಕ ಯಶಪಾಲ್ ಸುವರ್ಣ ಹೇಳಿದರು.ಶನಿವಾರ ಆದಿವುಡುಪಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಓಬವ್ವ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಒನಕೆ ಓಬವ್ವ 18ನೇ ಶತಮಾನದಲ್ಲಿ ಬಾಳಿದ ವೀರ ವನಿತೆ. ಹೈದರಾಲಿಯ ಸೈನಿಕರು ಚಿತ್ರದುರ್ಗದ ಕೋಟೆಗೆ ಮುತ್ತಿಗೆ ಹಾಕಿದಾಗ, ಎದೆಗುಂದದೆ ಶತ್ರು ಸೈನ್ಯವನ್ನು ತನ್ನ ಒನಕೆಯಿಂದಲೇ ಮಟ್ಟಹಾಕಿದ ಆಕೆಯ ಸಾಹಸ ಇಂದು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ ಎಂದರು.
ಯುವ ಪೀಳಿಗೆ ಮಹನಿಯರ ಜಯಂತಿಯಲ್ಲಿ ಭಾಗವಹಿಸುವ ಮೂಲಕ ಸನಾತನ ಸಂಸ್ಕೃತಿ, ಆಚಾರ ವಿಚಾರಗಳನ್ನು ಪಾಲಿಸಬೇಕು.
ದೇಶದ ರಕ್ಷಣೆಗೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಹೆಣ್ಣು ಮಕ್ಕಳು ದೇಶದ ಆಸ್ತಿ. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಕೊಡುಗೆ ನೀಡುವ ಕೆಲಸ ಅವರಿಂದ ಆಗಬೇಕು ಎಂದು ಶಾಸಕ ಯಶಪಾಲ್ ಆಶಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಶಸ್ತ್ರಗಳನ್ನು ಬಳಸದೇ, ರಣರಂಗ ಪ್ರವೇಶಿಸದೇ ಅಸಂಖ್ಯಾತ ಶತ್ರು ಸೈನಿಕರನ್ನು ಕೇವಲ ಒಂದು ಒನಕೆಯಿಂದ ಸಂಹರಿಸಿ, ಇತಿಹಾಸ ಪ್ರಸಿದ್ಧವಾದ, ವೀರ ನಾಡೆನಿಸಿದ ಚಿತ್ರದುರ್ಗದ ಉಕ್ಕಿನ ಕೋಟೆಯನ್ನು ಶತ್ರುಗಳ ಕುತಂತ್ರ ಆಕ್ರಮಣದಿಂದ ರಕ್ಷಿಸಿದ ಧೀಮಂತ ಮಹಿಳೆ ಒನಕೆ ಓಬವ್ವ ಎಂದರು.
ಸಾಹಿತಿ ಡಾ| ಗಣನಾಥ ಎಕ್ಕಾರು ಉಪನ್ಯಾಸ ನೀಡಿ, ದೇಶದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಗಮನಿಸಿದಾಗ ಪುರುಷರಷ್ಟೇ ಹೆಣ್ಣು ಮಕ್ಕಳೂ ಪ್ರಭಾವಶಾಲಿಗಳಾಗಿದ್ದು, ಅವರಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ವೇದ ಕಾಲದ ಗಾರ್ಗಿ, ಮೈತ್ರೇಯಿ ಮೊದಲಾದವರ ನಂತರ 12ನೇ ಶತಮಾನದ ಕ್ರಾಂತಿಯ ಸಂದರ್ಭದಲ್ಲಿ ಅಕ್ಕಮಹಾದೇವಿಯಂಥ ಸ್ತ್ರೀಶಕ್ತಿಯ ಪ್ರತೀಕ ನೋಡಬಹುದು.
ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯ ಹಾಗೂ ಶಕ್ತಿ ತುಂಬುವ, ಅವರನ್ನು ಗೌರವಿಸುವ ಸಂದೇಶ ನೀಡುವ ವಿಚಾರಗಳನ್ನು ಒನಕೆ ಓಬವ್ವ ಅವರ ಜೀವನದಲ್ಲಿ ಕಾಣಬಹುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕ್ಷೇತ್ರ ಶಿಕ್ಷಣಾಧಿಕಾರಿ ಡಾl ಅಶೋಕ್ ಕಾಮತ್, ಆದಿವುಡುಪಿ ಶಾಲಾ ಸಂಚಾಲಕ ಚಂದ್ರಶೇಖರ ಹೆಬ್ಬಾರ್ ಮೊದಲಾದವರಿದ್ದರು.
ಕಾರ್ಕಳದ ಅಮಿತ ಮತ್ತು ತಂಡದವರಿಂದ ಕನ್ನಡ ಗೀತ ಗಾಯನ ನಡೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಶಶಿಧರ್ ನಿರೂಪಿಸಿ, ಆದಿವುಡುಪಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರವೀಂದ್ರ ವಂದಿಸಿದರು.