Co-operative: ಸಹಕಾರಿ ಸಿಬಂದಿ ಸೇವಾ ಭದ್ರತೆ ಮಸೂದೆ ತಿದ್ದುಪಡಿ
Saturday, November 18, 2023
ಮಂಗಳೂರು, ನ.17 (ಲೋಕಬಂಧು ವಾರ್ತೆ): ರಾಜ್ಯದ ಸಹಕಾರಿ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಿಬ್ಬಂದಿಗಳಿಗೆ ನೂತನ ಸೇವಾ ಭದ್ರತೆ ನೀಡುವ ತಿದ್ದುಪಡಿ ಮಸೂದೆ ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.ಶುಕ್ರವಾರ ಎಸ್.ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಹಕಾರಿ ಕ್ಷೇತ್ರದ ನಿಯಮ 128(ಎ)ಕ್ಕೆ ತಿದ್ದುಪಡಿ ತಂದು ಸಹಕಾರ ಕ್ಷೇತ್ರ ಮತ್ತು ಹಾಲು ಉತ್ಪಾದಕರ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸೇವಾ ಭದ್ರತೆ ದೊರೆಯಲಿದೆ. ಕಳೆದ ಹತ್ತು ವರ್ಷಗಳಿಂದ ಇರುವ ಕಾನೂನಿನಲ್ಲಿ ಬದಲಾವಣೆಯಾಗಲಿದೆ ಎಂದು ಸಚಿವ ರಾಜಣ್ಣ ತಿಳಿಸಿದರು.
ರಾಜ್ಯದಲ್ಲಿ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ನೀಡಲಾಗುವ ಸಾಲದ ಪ್ರಮಾಣವನ್ನು 3 ಲಕ್ಷ ದಿಂದ 5 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಶೇ. 3ರ ಪ್ರಮಾಣದ ಮಧ್ಯಾವಧಿ ಸಾಲದ ಪ್ರಮಾಣವನ್ನು 15 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ರಾಜ್ಯದಲ್ಲಿ ಹೈನುಗಾರರ ಮೂಲಕ ಖರೀದಿಯ ಹಾಲಿಗೆ ರೂ. 3 ಹೆಚ್ಚುವರಿ ನೀಡಲಾಗುತ್ತದೆ. ಆದರೆ, ಗ್ರಾಹಕರ ಹಾಲಿನ ದರ ಏರಿಕೆ ಪ್ರಸ್ತಾಪ ಇಲ್ಲ ಎಂದವರು ಸ್ಪಷ್ಟಪಡಿಸಿದರು.
ಎಸ್.ಸಿಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಸಚಿವ ರಾಜಣ್ಣ ಪ್ರಶಂಸಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾl ಎಂ. ಎನ್. ರಾಜೇಂದ್ರ ಕುಮಾರ್, ನಿರ್ದೇಶಕ ಡಾl ಐಕಳಬಾವ ದೇವಿಪ್ರಸಾದ್ ಶೆಟ್ಟಿ ಮೊದಲಾದವರಿದ್ದರು.