.jpg)
Udupi: ಶ್ರೀಕೃಷ್ಣ ಮಂಡಲೋತ್ಸವ ಆರಂಭ
Friday, August 1, 2025
ಲೋಕಬಂಧು ನ್ಯೂಸ್, ಉಡುಪಿ
ಶ್ರೀಕೃಷ್ಣ ಮಠದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು 48 ದಿನಗಳ ಕಾಲ ಆಚರಿಸಲಾಗುತ್ತಿದ್ದು, ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಆಶ್ರಯದಲ್ಲಿ ಸೆ. 17ರ ವರೆಗೆ ನಡೆಯುವ ಶ್ರೀಕೃಷ್ಣ ಮಂಡಲೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಚಾಲನೆ ನೀಡಿದರು.
ಪಡೆದಿದುದನ್ನು ಮರಳಿ ನೀಡಬೇಕೆನ್ನುವುದು ಹಿಂದೂ ಧರ್ಮ ಸಹಿತ ಎಲ್ಲ ಧರ್ಮಗಳ ಸಾರವಾಗಿದ್ದು, ವಿಶ್ವ ಚೇತನವಾದ ಸೂರ್ಯನಿಂದ ಪಡೆದ ಉಪಕಾರವನ್ನು ಆತನಿಗೆ ನಮಸ್ಕಾರ ಸಲ್ಲಿಸುವ ಮೂಲಕ ಉಪಕಾರ ಸ್ಮರಣೆ ಮಾಡಬೇಕು. ಸೂರ್ಯನಿಗೆ ನಮಸ್ಕರಿಸಿಲ್ಲಿ ಆತನ ಅಂತರ್ಗತನಾದ ಜಗನ್ನಿಯಾಮಕ ಶ್ರೀಕೃಷ್ಣನಿಗೆ ನಮಸ್ಕಾರ ಸಲ್ಲಿಸಿದಂತಾಗುತ್ತದೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಕೃಷ್ಣ ಮಂತ್ರೋಪದೇಶ
ಭಗವಂತನ ಆರಾಧನೆಯನ್ನು ವಿವಿಧ ರೂಪಗಳಲ್ಲಿ ಮಾಡಬಹುದಾದರೂ ನಾಮ ಜಪ ಯಜ್ಞ ಮೂಲಕ ನಡೆಸುವ ಆರಾಧನೆ ಶ್ರೇಷ್ಠ ಎಂಬುದಾಗಿ ಶ್ರೀಕೃಷ್ಣನೇ ಗೀತೆಯಲ್ಲಿ ಸಾರಿದ್ದಾನೆ.
ಪರಮ ಗುರುಗಳಾದ ಶ್ರೀ ಸುಧೀಂದ್ರತೀರ್ಥ ಶ್ರೀಪಾದರು ಸಿದ್ಧಿ ಪಡೆದ ಸ್ವಾಮಿ ಶ್ರೀಕೃಷ್ಣಾಯ ನಮಃ ಮಂತ್ರ ಜಪಾನುಷ್ಠಾನದ ಮೂಲಕ ಭಗವದನುಗ್ರಹಕ್ಕೆ ಪಾತ್ರರಾಗುವುದು ಸಾಧ್ಯ. ಈ ನಿಟ್ಟಿನಲ್ಲಿ ಕೋಟಿ ಶ್ರೀಕೃಷ್ಣ ಜಪ ಸಂಕಲ್ಪಿಸಿರುವುದಾಗಿ ಶ್ರೀಪಾದರು ತಿಳಿಸಿದರು.
ಸಾಮೂಹಿಕ ಶ್ರೀಕೃಷ್ಣ ಮಂತ್ರೋಪದೇಶ ನೀಡಿದರು.ಅದಕ್ಕೂ ಮುನ್ನ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಉದ್ಘಾಟಿಸಿದರು.
ಮಠದ ಅಂತರಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ ಮಂಜ ಮೊದಲಾದವರಿದ್ದರು.
ರಾಘವೇಂದ್ರ ಭಟ್ ಪಣಿಯಾಡಿ ಸ್ವಾಗತಿಸಿದರು. ವಿದ್ವಾನ್ ಗೋಪಾಲಾಚಾರ್ಯ ಕಾರ್ಯಕ್ರಮ ನಿರ್ವಹಿಸಿ, ರಮೇಶ್ ಭಟ್ ವಂದಿಸಿದರು.
ಮಂಡಲೋತ್ಸವದ ಅಂಗವಾಗಿ ವಿವಿಧ ಯೋಗ ಸಂಸ್ಥೆಗಳ ಯೋಗಾರ್ಥಿಗಳು 48 ಸೂರ್ಯ ನಮಸ್ಕಾರ ಮಾಡಿದರು.