-->
Sanchi Honnamma: ಸ್ತ್ರೀವಾದಿ ಸಂಚಿ ಹೊನ್ನಮ್ಮ

Sanchi Honnamma: ಸ್ತ್ರೀವಾದಿ ಸಂಚಿ ಹೊನ್ನಮ್ಮ

ಕ್ರಿ.ಶ. 1672ರಿಂದ 1704ರ ನಡುವೆ ಜೀವಿಸಿದ್ದ ಸಂಚಿ ಹೊನ್ನಮ್ಮ, ಚಾಮರಾಜನಗರದ ಎಳಂದೂರಿನಲ್ಲಿ ಜನಿಸಿದಾಕೆ.ಅರಮನೆಯ ಊಳಿಗದ ಹೆಣ್ಣಾದ ಅವಳು ಎಲೆ ಅಡಕೆಯ ಚೀಲ (ಸಂಚಿ)ವನ್ನು ಹಿಡಿದು, ಅರಮನೆಯಲ್ಲಿ ರಾಜ-  ರಾಣಿಯರ ಸಮೀಪವರ್ತಿಯಾಗಿ ಕೆಲಸ ಮಾಡಿಕೊಂಡಿದ್ದವಳು.


ಸಂಚಿ ಎಂದರೆ ಚೀಲ. ಎಲೆ ಅಡಿಕೆಯ ಸಂಚಿಯನ್ನು ಹಿಡಿದು ಊಳಿಗ ಮಾಡುತ್ತಿದ್ದ ಹೊನ್ನಮ್ಮ ಸಂಚಿ ಹೊನ್ನಮ್ಮ ಎಂದೇ ಕರೆಯಲ್ಪಟ್ಟಳು.


ರಾಜ ಚಿಕ್ಕದೇವರಾಯ ಒಡೆಯರ್ ಪಟ್ಟದರಸಿ ದೇವರಾಜಮ್ಮಣ್ಣಿಯ ಸೇವಕಿಯಾಗಿದ್ದರೂ ರಾಣಿ ಈಕೆಯೊಂದಿಗೆ ಅತೀ ಆತ್ಮೀಯತೆಯೊಂದಿಗಿದ್ದಳು.


ಹೊನ್ನಮ್ಮ ಬುದ್ಧಿವಂತಳು ಎಂದು ಅರಿತ ಅರಸಿ ಅವಳಿಗೆ ಆಗಿನ ಘನ ಪಂಡಿತರಾಗಿದ್ದ ಸಿಂಗರಾರ್ಯ ತಿರುಮಲಾರ್ಯ ಅವರಿಂದ ಶಿಕ್ಷಣ ಕೊಡಿಸಿದಳು.


ಅರಸರ ಅಪೇಕ್ಷೆಯಂತೆ ಹೊನ್ನಮ್ಮ ಹದಿಬದೆಯ ಧರ್ಮ ಎಂಬ ಸಾಂಗತ್ಯ ಕಾವ್ಯವನ್ನು ರಚಿಸಿದಳು. ಅದರಲ್ಲಿ  9 ಸಂಧಿಗಳಿದ್ದು, 479 ಪದ್ಯಗಳಿವೆ. ಆ ಕಾವ್ಯ ಅಂದಿನ ಸನಾತನ ಧರ್ಮದ ಪದ್ಧತಿಗನುಗುಣವಾಗಿ ಮಹಿಳೆಯ ಪಾತಿವ್ರತ್ಯ, ಪತಿಸೇವೆ, ಅತ್ತೆ ಮಾವನ ಸೇವೆ ಮೊದಲಾದ ವಿಷಯಗಳನ್ನೊಳಗೊಂಡಿದ್ದರೂ ಮಹಿಳೆಯನ್ನು ಪುರುಷರು ಕಡೆಗಣಿಸಬಾರದು ಎಂಬ ಸಂದೇಶವನ್ನೂ ನೀಡಿರುವುದು ಗಮನಾರ್ಹ!


ಹೆಣ್ಣು ನಿಮ್ಮನ್ನು ಹೆತ್ತು ಹೊತ್ತವಳು. ಅವಳನ್ನು ಗೌರವದಿಂದ ನೋಡದೆ ತಿರಸ್ಕಾರದಿಂದ ನೋಡುವವರು ಕಣ್ಣಿಲ್ಲದ ಮೂರ್ಖರು ಎಂದು ಹೊನ್ನಮ್ಮ ಕಟುವಾಗಿ ಹೇಳಿದ್ದಾಳೆ. ಆಗಿನ ಕಾಲಘಟ್ಟದಲ್ಲಿ  ಈ ರೀತಿಯ ದಿಟ್ಟತನ ಅಪರೂಪ!


ಸ್ತ್ರೀಪರ ಚಿಂತನೆಯ, ಹೆಣ್ಣು ಕೀಳಲ್ಲ ಎಂಬ ಭಾವನೆಯ ತಣ್ಣಗಿನ, ಮೆಲುದನಿಯ ಪ್ರತಿಭಟನೆಯ ದನಿಯನ್ನು ಹೊಂದಿದ್ದ ಪ್ರಖರ ಸ್ತ್ರೀಪರವಾದಿ ಸಂಚಿ ಹೊನ್ನಮ್ಮ ಸದಾ ಸ್ಮರಣೀಯಳು.

-✍️ಸುಬ್ರಹ್ಮಣ್ಯ ಬಾಸ್ರಿ, ಉಡುಪಿ

Ads on article

Advertise in articles 1

advertising articles 2

Advertise under the article