-->
Sringeri: ಶೃಂಗೇರಿಯಲ್ಲಿ ಏಕಶಿಲಾ ಶಂಕರಾಚಾರ್ಯ ವಿಗ್ರಹ ಸ್ಥಾಪನೆ

Sringeri: ಶೃಂಗೇರಿಯಲ್ಲಿ ಏಕಶಿಲಾ ಶಂಕರಾಚಾರ್ಯ ವಿಗ್ರಹ ಸ್ಥಾಪನೆ

ಶೃಂಗೇರಿ, ನ.11: (ಲೋಕಬಂಧು ವಾರ್ತೆ): ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಶುಕ್ರವಾರ ಇಲ್ಲಿನ ಮಾರುತಿ ಬೆಟ್ಟದಲ್ಲಿ 32 ಅಡಿ ಎತ್ತರದ ಕುಳಿತ ಭಂಗಿಯ ಶ್ರೀ ಶಂಕರಾಚಾರ್ಯರ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಹಾಗೂ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮಿಗಳು ಬೃಹತ್ ಮೂರ್ತಿಯನ್ನು ಉದ್ಘಾಟಿಸಿದರು.
ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು 1974ರಲ್ಲಿ ಆಶ್ವಯುಜ ಕೃಷ್ಣ ದ್ವಾದಶಿಯಂದು ಜಗದ್ಗುರು ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳಿಂದ ಸನ್ಯಾಸ ಸ್ವೀಕರಿಸಿದ್ದರು. ಸನ್ಯಾಸ ಸ್ವೀಕರಿಸಿ 50 ವರ್ಷವಾಗುತ್ತಿರುವ ಈ ಸಂದರ್ಭದಲ್ಲಿ ಜಗದ್ಗುರು ಶ್ರೀ ಆದಿಶಂಕರಾಚಾರ್ಯರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಪಂಚ ಮೂರ್ತಿ ಸ್ಥಾಪನೆ
ಶ್ರೀ ಶಂಕರಾಚಾರ್ಯರ ವಿಗ್ರಹದೊಂದಿಗೆ ಅವರ ನಾಲ್ವರು ಶಿಷ್ಯರಾದ ಶ್ರೀ ಸುರೇಶ್ವರಾಚಾರ್ಯರು, ಶ್ರೀ ಪದ್ಮಪಾದಾಚಾರ್ಯರು, ಶ್ರೀ ತೋಟಕಾಚಾರ್ಯರು ಮತ್ತು ಶ್ರೀ ಹಸ್ತಾಮಲಕಾಚಾರ್ಯರು ಹಾಗೂ ವಿಜಯನಗರ ಪ್ರತಿಷ್ಠಾಪನಾಚಾರ್ಯ ಜಗದ್ಗುರು ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳ 12 ಅಡಿ ಎತ್ತರದ ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗಿದೆ.
ಮೆರವಣಿಗೆ
ಶ್ರೀಮಠದಲ್ಲಿ ಬೆಳಿಗ್ಗೆ ಶ್ರೀ ಶಂಕರಾಚಾರ್ಯರ ರಜತ ಮೂರ್ತಿಗೆ ಪೂಜೆ ಸಲ್ಲಿಸಿ, ಶೃಂಗೇರಿ ಪಟ್ಟಣದ ಮುಖ್ಯ ರಸ್ತೆ ಮೂಲಕ ಮೆರವಣಿಗೆಯಲ್ಲಿ ತರಲಾಯಿತು. ಬಳಿಕ ಶಂಕರರ ರಜತ ಮೂರ್ತಿಯನ್ನು ಭವ್ಯಮೂರ್ತಿಯ ಬಳಿ ಇಡಲಾಯಿತು.
ಜ್ಯೋತಿ ಬೆಳಗುವ ಮೂಲಕ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಭವ್ಯ ಶ್ರೀ ಶಂಕರ ವಿಗ್ರಹ ಲೋಕಾರ್ಪಣೆಗೊಳಿಸಿದರು.

ಶ್ರೀ ಶಂಕರಾಚಾರ್ಯರ ರಜತ ಉತ್ಸವಮೂರ್ತಿಗೆ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಮತ್ತು ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮಿಗಳು ವಿಶೇಷ ಪೂಜೆ ಸಲ್ಲಿಸಿದರು.
ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಶ್ರೀ ಶಂಕರರ ಭವ್ಯಮೂರ್ತಿಗೆ ಜಲಾಭಿಷೇಕ, ಅಕ್ಷತಾರ್ಚನೆ, ಪುಷ್ಪಾರ್ಚನೆ ನಡೆಸಿದರು.
ಮೊಳಗಿದ ಜಯಕಾರ
ಮಾರುತಿಬೆಟ್ಟದ ಸುತ್ತಮುತ್ತಲೂ ಸೇರಿದ ಭಕ್ತರು ಕಿರಿಯ ಶ್ರೀಗಳು ಧಾರ್ಮಿಕ ಪ್ರಕ್ರಿಯೆ ನೆರವೇರಿಸುತ್ತಿದ್ದ ಸಂದರ್ಭದಲ್ಲಿ ಶ್ರೀ ಶಂಕರಾಚಾರ್ಯರಿಗೆ ಜಯವಾಗಲಿ ಎಂಬ ಉದ್ಘೋಷ ಮೊಳಗಿಸಿದರು.
ಶ್ರೀ ಶಂಕರ ಭಗವತ್ಪಾದರ ಶಿಷ್ಯರಾದ ಜಗದ್ಗುರುಗಳಾದ ಶ್ರೀ ಸುರೇಶ್ವರಾಚಾರ್ಯ, ಪದ್ಮಪಾದಾಚಾರ್ಯ, ಹಸ್ತಮಲಕಾಚಾರ್ಯ, ತೋಟಕಾಚಾರ್ಯ ಮೂರ್ತಿಗಳು ಹಾಗೂ ಜಗದ್ಗುರು ಶ್ರೀ ವಿದ್ಯಾರಣ್ಯರ ಮೂರ್ತಿಗಳಿಗೆ ಉಭಯ ಜಗದ್ಗುರುಗಳು ವಿಶೇಷ ಪೂಜೆ ನೆರವೇರಿಸಿದರು.
ವಿದ್ವಾಂಸರಿಗೆ ಗೌರವ
ಉದ್ಘಾಟನೆ ಸಮಾರಂಭದಲ್ಲಿ ದೇಶದ 10 ಮಂದಿ ವೇದ ವಿದ್ವಾಂಸರಿಗೆ ತಲಾ 1 ಲಕ್ಷ ನಗದು ಸಹಿತ ಗೌರವಿಸಲಾಯಿತು.
ಶ್ರೀಮಠದ ಆಡಳಿತಾಧಿಕಾರಿ ಡಾl ವಿ. ಆರ್. ಗೌರಿಶಂಕರ್ ಇದ್ದರು.

ಶ್ರೀಮಠದ ವಿದ್ವಾಂಸರಾದ ಶಿವಕುಮಾರ ಶರ್ಮ ಮತ್ತು ಸೀತಾರಾಮ ಶರ್ಮ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದವು.

ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ, ಶಿವಗಂಗಾ ಮಠದ ಪುರುಷೋತ್ತಮ ಶ್ರೀ ಭಾರತಿ ಸ್ವಾಮೀಜಿ, ನೆಲಮಾವು ಮಠದ ಶ್ರೋ ಮಾಧವಾನಂದಭಾರತಿ ಸ್ವಾಮೀಜಿ, ಶೃಂಗೇರಿ ಶಾಸಕ ಡಿ.ಟಿ. ರಾಜೇಗೌಡ ಇದ್ದರು.

ಶ್ರೀಮಠದ ಆವರಣದಲ್ಲಿ ಅತಿರುದ್ರ ಯಾಗ ಮತ್ತು ಸಹಸ್ರಚಂಡೀ ಮಹಾಯಾಗದ ಪೂರ್ಣಾಹುತಿ ನೆರವೇರಿತು.

ಶಂಕರಗಿರಿ ನಾಮಕರಣ
ಶ್ರೀ ಶಂಕರಾಚಾರ್ಯರ ಶಿಲಾಮಯ ಭವ್ಯ ಪ್ರತಿಮೆ ಸ್ಥಾಪಿಸಿರುವ ಶೃಂಗೇರಿ ಹೊರವಲಯದ ಮಾರುತಿ ಬೆಟ್ಟ  ಪ್ರದೇಶಕ್ಕೆ ಜಗದ್ಗುರುಗಳು ಶ್ರೀ ಶಂಕರಗಿರಿ ಎಂದು ನಾಮಕರಣ ಮಾಡಿದ್ದಾರೆ.

ಪ್ರವಾಸಿ ತಾಣವಾಗಿ ಅಭಿವೃದ್ಧಿ
45 ಕೋಟಿ ರೂ. ವೆಚ್ಚದಲ್ಲಿ ಸುಮಾರು 2 ಎಕರೆ ಜಾಗದಲ್ಲಿ ಶ್ರೀಶಂಕರಗಿರಿ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳಲಿದೆ.

ಪಶ್ಚಿಮಘಟ್ಟ ಪ್ರದೇಶದ ಹಸಿರು ಹೊದಿಕೆ ಸೂರ್ಯೋದಯ ಹಾಗೂ ಸುರ್ಯಾಸ್ತಮಾನದ ದೃಶ್ಯ ಇಲ್ಲಿಂದ ಕಾಣಲಿದೆ.

ಬೆಟ್ಟ ಹತ್ತಲು ಎಕ್ಸಲೇಟ‌ರ್ ವ್ಯವಸ್ಥೆ ಇದೆ. ಆಂಜನೇಯ ದೇವಸ್ಥಾನ, ಕಾರಂಜಿ, ಗ್ರಂಥಾಲಯ, ಪುಸ್ತಕ ಮಳಿಗೆ ಇದೆ.

ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಕೆಳಗಡೆ ವಸತಿ ಗೃಹಗಳು ನಿರ್ಮಾಣವಾಗುತ್ತಿವೆ.

ಒಂದು ತಿಂಗಳ ಬಳಿಕ ಅಲ್ಲಿಗೆ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುತ್ತದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article