Shobha Karandlaje: ನಾಲ್ವರ ಕೊಲೆ: ಸಾಂತ್ವನ ಹೇಳದ ಸಂಸದೆ
Saturday, November 18, 2023
ಉಡುಪಿ, ನ.18 (ಲೋಕಬಂಧು ವಾರ್ತೆ): ಕರಾವಳಿಯನ್ನೇ ಬೆಚ್ಚಿಬೀಳಿಸಿದ ನೇಜಾರು ಒಂದೇ ಕುಟುಂಬದ ನಾಲ್ವರ ಹತ್ಯೆ ನಡೆದು ವಾರವಾಗುತ್ತಾ ಬಂದರೂ ಕನಿಷ್ಠ ಸೌಜನ್ಯಕ್ಕಾದರೂ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವರ್ತನೆ ನಾಚೀಕೆಗೇಡು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಜ್ಯದ ಯಾವುದೇ ಭಾಗದಲ್ಲಿ ಯಾರೇ ಸತ್ತರೂ ಅದಕ್ಕೆ ಧರ್ಮದ ರಾಜಕೀಯ ಬೆರೆಸಿ ಅರೆಚಾಟ ಮಾಡುವ ಸಂಸದೆ ಕರಂದ್ಲಾಜೆ, ತನ್ನದೇ ಕ್ಷೇತ್ರದಲ್ಲಿ ತಾಯಿ ಮತ್ತು ಮೂವರು ಮಕ್ಕಳು ಅಮಾನುಷವಾಗಿ ಕೊಲೆಯಾಗಿದ್ದಾರೆ. ಕೊಲೆಯಾದವರಲ್ಲಿ ಮೂವರು ಮಹಿಳೆಯರಾಗಿದ್ದು, ಓರ್ವ ಮಹಿಳೆಯಾಗಿ ಸಂಸದೆ ಮೃತ ಕುಟುಂಬ ಸದಸ್ಯರ ದುಃಖದಲ್ಲಿ ಭಾಗಿಯಾಗುವ ಸೌಜನ್ಯ ತೋರದಿರುವುದು ಅತ್ಯಂತ ಕಳವಳಕಾರಿ ಸಂಗತಿ.
ಸಂಸದೆಯಾಗಿ ಅವರು ಕೇವಲ ಒಂದು ಧರ್ಮ ಅಥವಾ ಸಮುದಾಯಕ್ಕೆ ಸೀಮಿತರಾಗಿಲ್ಲ ಎನ್ನುವುದನ್ನು ಶೋಭಾ ಕರಂದ್ಲಾಜೆ ಮರೆತಿದ್ದಾರೆ. ಸಬ್ ಸಾಥ್ ಸಬ್ ಕಾ ವಿಕಾಸ್ ಎನ್ನುವ ಮೋದಿ ತತ್ವದಿಂದ ಶೋಭಾ ಕರಂದ್ಲಾಜೆ ಹೊರಗಿದ್ದಾರೆಯೇ ಅಥವಾ ಕೇವಲ ಒಂದು ಸಮುದಾಯದವರ ಕೊಲೆ ಅಥವಾ ಮೃತರಾದಾಗ ಬಂದು ಮೊಸಳೆ ಕಣ್ಣೀರು ಹಾಕುತ್ತಾರೆಯೇ?
ಬಿಜೆಪಿಯವರು ಪ್ರತಿಯೊಂದನ್ನೂ ಧರ್ಮಧ ದೃಷ್ಟಿಯಲ್ಲಿ ನೋಡುತ್ತಿದ್ದಾರೆ ಎನ್ನುವುದನ್ನು ಸಂಸದೆಯವರು ಸಾಬೀತುಪಡಿಸಿದ್ದಾರೆ ಎಂದು ಕಾಂಚನ್ ಕಿಡಿಕಾರಿದ್ದಾರೆ.
ಜಿಲ್ಲೆಯ ಪೊಲೀಸ್ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲವಾದಲ್ಲಿ ಬಿಜೆಪಿಯವರು ಪ್ರಕರಣವನ್ನು ಧರ್ಮದ ಲೇಬಲ್ ಅಂಟಿಸಿ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮತ್ತವರ ತಂಡದ ಕಾರ್ಯ ಶ್ಲಾಘನೀಯ.
ಜಿಲ್ಲೆಯಿಂದ ಆಯ್ಕೆಯಾದ ಸಂಸದೆ ಪ್ರತಿಯೊಂದು ವಿಚಾರವನ್ನೂ ತಮ್ಮ ರಾಜಕೀಯ ಬೇಳೆ ಬೇಯಿಸುವುದಕ್ಕೆ ಉಪಯೋಗಿಸುವುದನ್ನು ಬಿಟ್ಟು ಸ್ವಲ್ಪ ಮನುಷ್ಯತ್ವಕ್ಕೂ ಬೆಲೆ ನೀಡುವ ಕೆಲಸ ಮಾಡಲಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಮೇಶ್ ಕಾಂಚನ್ ಕಿವಿಮಾತು ಹೇಳಿದ್ದಾರೆ.