.jpg)
Nejar case: ನೇಜಾರು ಪ್ರಕರಣ: ಆರೋಪಿ ವಿರುದ್ಧ ಜನಾಕ್ರೋಶ; ಲಘು ಲಾಠಿ ಪ್ರಹಾರ
Thursday, November 16, 2023
ಉಡುಪಿ, ನ.16 (ಲೋಕಬಂಧು ವಾರ್ತೆ): ಒಂದೇ ಕುಟುಂಬದ ನಾಲ್ವರನ್ನು ಅಮಾನವೀಯವಾಗಿ ಹತ್ಯೆ ಮಾಡಿದ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಸ್ಥಳ ಮಹಜರಿಗಾಗಿ ಗುರುವಾರ ನೇಜಾರಿಗೆ ಪೊಲೀಸರು ಕರೆದುಕೊಂಡು ಬಂದಿದ್ದ ವೇಳೆ ಆರೋಪಿ ವಿರುದ್ಧ ಆಕ್ರೋಶಗೊಂಡ ಮಂದಿ ಆರೋಪಿಯನ್ನು ತಮ್ಮ ವಶಕ್ಕೊಪ್ಪಿಸುವಂತೆ ಆಗ್ರಹಿಸಿದ ಘಟನೆ ನಡೆಯಿತು. ಉದ್ರಿಕ್ತಗೊಂಡ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಲಾಠಿ ಪ್ರಹಾರ ನಡೆಸಿದ ಪೊಲೀಸರ ವಿರುದ್ಧ ಆಕ್ರೋಶಿತರು ಕೋಪಗೊಂಡು ರಸ್ತೆ ತಡೆ ನಡೆಸಿದರು.
ಪೊಲೀಸರು ಆರೋಪಿ ಚೌಗಲೆಯನ್ನು ಸ್ಥಳ ಮಹಜರಿಗಾಗಿ ಕರೆದುಕೊಂಡು ಬಂದ ವೇಳೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನತೆ, `ಆರೋಪಿಯನ್ನು ನಮ್ಮ ಕೈಗೊಪ್ಪಿಸಿ, ನಾವು ಶಿಕ್ಷೆ ಕೊಡುತ್ತೇವೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಆರೋಪಿ ಇದ್ದ ಪೊಲೀಸ್ ವಾಹನದ ಮೇಲೆ ನುಗ್ಗಲು ಯತ್ನಿಸಿದ ಸಾರ್ವಜನಿಕರನ್ನು ತಡೆಯಲು ಲಾಠಿ ಹಿಡಿದು ಪೊಲೀಸರು ಚದುರಿಸಲು ಯತ್ನಿಸಿದರು. ಪರಿಸ್ಥಿತಿ ನಿಯಂತ್ರಣ ಮೀರುವ ಸ್ಥಿತಿ ತಲುಪಿದಾಗ ಲಘು ಲಾಠಿ ಪ್ರಹಾರ ಮಾಡಿದರು. ಆಗ ಬಿಗುವಿನ ವಾತಾವರಣ ಉಂಟಾಗಿದ್ದು, ಕೆಲವರಿಗೆ ಪೊಲೀಸರ ಲಾಠಿ ಏಟು ಬಿದ್ದಿದೆ.
`ಆತ ಕೊಲೆಗಾಗಿ 15 ನಿಮಿಷ ತೆಗೆದುಕೊಂಡಿದ್ದಾನೆ. ನಮಗೆ 30 ಸೆಕೆಂಡು ಅವನನ್ನು ಕೊಡಿ' ಎಂದು ಆಗ್ರಹಿಸಿ ಆಕ್ರೋಶಿತರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.
ಪರಿಸ್ಥಿತಿ ಶಾಂತವಾಗಿದ್ದು, ಸಮುದಾಯದ ಹಿರಿಯರೊಂದಿಗೆ ಮಾತುಕತೆ ನಡೆಸಿ, ಜನತೆ ಶಾಂತಿ ಕಾಪಾಡಿ ತನಿಖೆಗೆ ಸಹಕರಿಸುವಂತೆ ಮನವಿ ಮಾಡಿರುವುದಾಗಿ ಎಸ್.ಪಿ. ಡಾ. ಅರುಣ್ ತಿಳಿಸಿದ್ದಾರೆ.