.jpg)
ಭಾಗವತ ಪಾರಾಯಣದಿಂದ ಶ್ರೇಯಸ್ಸು: ಭಂಡಾರಕೇರಿ ಶ್ರೀ
Wednesday, July 24, 2024
ಭಾಗವತ ಪಾರಾಯಣದಿಂದ ಶ್ರೇಯಸ್ಸು: ಭಂಡಾರಕೇರಿ ಶ್ರೀ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಮಾನವರ ದುಃಖ, ಸಂಕಷ್ಟ ನಿವಾರಣೆಗೆ ಭಾಗವತ ದಿವೌಷಧ. ಅಂಥ ಮಹಾನ್ ಗ್ರಂಥದ ಪಾರಾಯಣದಿಂದ ಶ್ರೇಯಸ್ಸು ಸಾಧ್ಯ ಎಂದು ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಹೇಳಿದರು.
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಅಪೇಕ್ಷೆಯಂತೆ 37 ವರ್ಷದ ಬಳಿಕ ಉಡುಪಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳಲು ಬುಧವಾರ ಆಗಮಿಸಿದ್ದ ಶ್ರೀಪಾದರಿಗೆ ಪುತ್ತಿಗೆ ಮಠ ವತಿಯಿಂದ ರಾಜಾಂಗಣದಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ತಮ್ಮ ಚಾತುರ್ಮಾಸ್ಯ ಅವಧಿಯಲ್ಲಿ ಉಡುಪಿಯ ಮನೆ ಮನೆಗಳಿಗೆ ತೆರಳಿ ಯಾವುದೇ ಫಲಾಪೇಕ್ಷೆ ಇಲ್ಲದೆ ಭಾಗವತ ಪ್ರಸಾರ ಕಾರ್ಯ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಅಧ್ಯಾತ್ಮದಿಂದ ಜೀವನ ಸಾರ್ಥಕ್ಯ
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಆಧ್ಯಾತ್ಮಿಕತೆಯಿಂದ ಜೀವನ ಸಾರ್ಥಕ್ಯ ಸಾಧ್ಯ.
ವಿದೇಶಗಳಲ್ಲಿ ಆಧ್ಯಾತ್ಮದ ಹಸಿವಿದೆ ಆದರೆ ಅವಕಾಶ ಇಲ್ಲ. ಭಾರತದಲ್ಲಿ ಅವಕಾಶ ಇದೆ. ಆದರೆ, ಸಾಧಕರ ಕೊರತೆ ಇದೆ. ಅವೆರಡನ್ನೂ ಹೊಂದಾಣಿಕೆ ಮಾಡಿ ಆಧ್ಯಾತ್ಮ ಪ್ರಸಾರದಲ್ಲಿ ತಾವು ತೊಡಗಿರುವುದಾಗಿ ತಿಳಿಸಿದರು.
ಭಾಗವತ- ಗೀತಾ ರಸಾಯನ
ಭಂಡಾರಕೇರಿ ಶ್ರೀಗಳು ಉಡುಪಿಯಲ್ಲಿ 37 ವರ್ಷಗಳ ಬಳಿಕ ಉಡುಪಿಯಲ್ಲಿ ಚಾತುರ್ಮಾಸ್ಯ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಭಾಗವತ ಫಲ, ಭಗವದ್ಗೀತೆ ಕ್ಷೀರ ಎರಡರ ಶ್ರವಣ- ಮನನ ರಸಾಯನ ಉಡುಪಿಯ ಜನತೆಗೆ ಆಗಲಿದೆ. ಉಡುಪಿ ಕ್ಷೇತ್ರ ಸದಾ ಒಂದಲ್ಲ ಒಂದು ಯತಿಗಳ ಪಾಠ ಪ್ರವಚನ, ಚಾತುರ್ಮಾಸ್ಯಾದಿ ಪರ್ವಕಾಲ, ಸಂಸ್ಕೃತಿ ಸಾಂಸ್ಕೃತಿಕ ಕಾರ್ಯಕ್ರಮ, ರಥೋತ್ಸವ, ನಿತ್ಯಾನ್ನದಾನ ಹೀಗೆ ಸದಾ ದೈವೀಕ ವಾತಾವರಣದಿಂದ ಕೂಡಿರುವ ಉಡುಪಿಯ ಮಹತ್ವವನ್ನು ಎಲ್ಲರೂ ಅರಿಯುವಂತಾಗಬೇಕು ಎಂದು ಆಶಿಸಿದರು.
ಭಂಡಾರಕೇರಿ ಶ್ರೀಪಾದರು ನಡೆಸಲಿರುವ ಮನೆ ಮನೆಯಲ್ಲಿ ಭಾಗವತ ಪ್ರವಚನ ಕಾರ್ಯಕ್ರಮದ ಉಪಯೋಗ ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದರು.
ಚಾತುರ್ಮಾಸ್ಯ ಸ್ವಾಗತ ಸಮಿತಿಯ ಯು.ಬಿ. ಶ್ರೀನಿವಾಸ್ ಸ್ವಾಗತಿಸಿದರು. ವಿದ್ವಾನ್ ಡಾ. ಗೋಪಾಲಾಚಾರ್ಯ ನಿರೂಪಿಸಿದರು. ಶ್ರೀವಿದ್ಯೇಶತೀರ್ಥರ ಪದಗಳನ್ನು ಪ್ರಸನ್ನ ಹಾಡಿದರು. ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಚಾರ್ಯ, ರತೀಶ್ ತಂತ್ರಿ, ಪ್ರದೀಪಕುಮಾರ್ ಕಲ್ಕೂರ, ಸ್ವಾಗತ ಸಮಿತಿಯ ಚಂದ್ರಶೇಖರ ಆಚಾರ್ಯ, ರಾಜೇಶ್ ಭಟ್, ಜಯರಾಮ ಆಚಾರ್ಯ, ರಮೇಶ್ ಭಟ್, ರವೀಂದ್ರಾಚಾರ್ಯ, ವಿಷ್ಣುಪ್ರಸಾದ್ ಪಾಡಿಗಾರು ಮೊದಲಾದವರಿದ್ದರು.
ಭವ್ಯ ಸ್ವಾಗತ
ಅದಕ್ಕೂ ಮುನ್ನ ಸಂಸ್ಕೃತ ಕಾಲೇಜು ಬಳಿಯಿಂದ ಕೃಷ್ಣಮಠ ವರೆಗೆ ಭಂಡಾರಕೇರಿ ಶ್ರೀಗಳನ್ನು ಸ್ವರ್ಣಪಲ್ಲಕಿಯಲ್ಲಿ ಶ್ರೀಮಠದ ಪಟ್ಟದ ದೇವರು ಹಾಗೂ ಶ್ರೀಪಾದರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.
ಕೃಷ್ಣ ದರ್ಶನ, ಚಂದ್ರಶಾಲೆಯಲ್ಲಿ ಮಾಲಿಕಾ ಮಂಗಳಾರತಿ ಸಹಿತ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಸಂಸ್ಥಾನ ಗೌರವ ಸಲ್ಲಿಸಲಾಯಿತು.