
ಆರೋಪ ಹಿಂಪಡೆಯದಿದ್ದಲ್ಲಿ ಧರಣಿ: ಸಂಸದ ಕೋಟ
Saturday, July 20, 2024
ಆರೋಪ ಹಿಂಪಡೆಯದಿದ್ದಲ್ಲಿ ಧರಣಿ: ಸಂಸದ ಕೋಟ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಅವ್ಯವಹಾರವೇ ನಡೆಯದಿರುವ ಭೋವಿ ನಿಗಮದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಅದರಲ್ಲಿ ನನ್ನ ಹೆಸರನ್ನು ಸೇರಿಸಿದ ಸಿಎಂ ಸಿದ್ದರಾಮಯ್ಯ ಒಂದು ವಾರದೊಳಗೆ ನನ್ನ ವಿರುದ್ಧ ಮಾಡಿರುವ ಆರೋಪ ವಾಪಸ್ ಪಡೆಯದಿದ್ದರೆ ವಿಧಾನಸೌಧ ಮತ್ತು ವಿಕಾಸಸೌಧ ನಡುವೆ ಇರುವ ಗಾಂಧಿ ಪ್ರತಿಮೆ ಎದುರು ಧರಣಿ ಕುಳಿತು ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಪರಿಶಿಷ್ಟ ಪಂಗಡದ ಹಣವನ್ನು ಇತರ ರಾಜ್ಯದ ಚುನಾವಣೆ ಹಾಗೂ ಮದ್ಯ ಖರೀದಿಗೆ ಬಳಸಿಕೊಂಡ ಕಾಂಗ್ರೆಸ್ ಸರಕಾರ, ತನ್ನ ಹುಳುಕನ್ನು ಮುಚ್ಚಿಡಲು ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆಯದಿರುವ ಪ್ರಕರಣಗಳನ್ನು ಹಗರಣ ಎಂದು ಬಿಂಬಿಸಿ ಜನತೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದರು.
ಸಿದ್ಧರಾಮಯ್ಯ ಸಿಎಂ ಆಗಿ ಒಂದು ವರ್ಷ ಕಳೆಯಿತು. ಸಿಐಡಿ ಅವರ ಅಧೀನದಲ್ಲಿದೆ. ನಾನು ತಪ್ಪು ಮಾಡಿದ್ದರೆ ತನಿಖೆ ಮಾಡಿಸಿ, ಜೈಲಿಗೆ ಕಳುಹಿಸಬಹುದಿತ್ತು. ಅದ್ಯಾವುದನ್ನೂ ಮಾಡಿಲ್ಲ.
ನಾನು ಮಂತ್ರಿಯಾಗಿದ್ದಾಗ ಅವರು ವಿಪಕ್ಷ ನಾಯಕನಾಗಿದ್ದಾಗಲೂ ಸೊಲ್ಲೆತ್ತದ ಸಿದ್ಧರಾಮಯ್ಯ, ವಾಲ್ಮೀಕಿ ಹಗರಣದ ಆರೋಪ ಬಂದಾಗ ಬೇರೆಯವರ ತಲೆಗೆ ಆರೋಪ ಹೊರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನನ್ನ ಹೆಸರು ಉಲ್ಲೇಖಿಸಿರುವುದನ್ನು ವಾಪಾಸು ಪಡೆಯಿರಿ ಅಥವಾ ಸಿಬಿಐಗೊಪ್ಪಿಸಿ. ನಾನು ತನಿಖೆ ಎದುರಿಸಲು ಸಿದ್ದನಿದ್ದೇನೆ.
ನಾನು ಒಂದು ರೂಪಾಯಿ ಅವ್ಯವಹಾರ ಮಾಡಿದ್ದರೆ ಸಿಬಿಐ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು.
ಕೋಟ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಮಂತ್ರಿಯಾಗಿದ್ದಾಗ ಹಗರಣ ಆಗಿಲ್ಲ ಎಂದು ಅಧಿಕಾರಿಗಳು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಹೇಳಿದ್ದಾರೆ.
ಒಂದೇ ಒಂದು ರೂಪಾಯಿ ದುರುಪಯೋಗ ಆಗಿಲ್ಲ ಎಂದು ಅಧಿಕಾರಿಗಳೇ ಹೇಳಿದ್ದರೂ, ನನ್ನ ಮೇಲೆ ಉದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದೀರಿ. ನಾನು ಸ್ಪಷ್ಟೀಕರಣ ಕೇಳಿ ನಿಮಗೆ ಪತ್ರ ಬರೆದಿದ್ದೇನೆ ಎಂದರು.