.jpg)
ನೆರೆ, ಕಡಲ್ಕೊರೆತ ಪ್ರದೇಶಗಳಿಗೆ ಸಚಿವೆ ಹೆಬ್ಬಾಳ್ಕರ್ ಭೇಟಿ
Sunday, July 21, 2024
ನೆರೆ, ಕಡಲ್ಕೊರೆತ ಪ್ರದೇಶಗಳಿಗೆ ಸಚಿವೆ ಹೆಬ್ಬಾಳ್ಕರ್ ಭೇಟಿ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಹಾಗೂ ಕಡಲ್ಕೊರೆತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾನುವಾರ ಭೇಟಿ ನೀಡಿದರು. ಹಾನಿ ಪರಿಹಾರಕ್ಕೆ ಶೀಘ್ರ ಪರಿಹಾರ ಬಿಡುಗಡೆಗೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು. ಸಚಿವೆ ಹೆಬ್ಬಾಳ್ಕರ್ ಭೇಟಿ ಕಾಟಾಚಾರದ್ದಾಗಿದ್ದು, ಕಡಲ ತೀರಕ್ಕೆ ಬಂದು ಚಿಕ್ಕಿ ತಿಂದಂತಾಗಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕಡಲ್ಕೊರೆತ ಪ್ರದೇಶಗಳಾದ ಹೂಡೆ ಮತ್ತು ಪಡುಬಿದ್ರಿ ಹಾಗೂ ನೆರೆಪೀಡಿತ ಪ್ರದೇಶಗಳಾದ ಬಿಜೂರು, ಒತ್ತಿನೆಣೆ, ಕೋಟ ಮೊದಲಾದೆಡೆಗಳಿಗೆ ಭೇಟಿ ನೀಡಿದರು.
ಮಳೆಯಿಂದ ಹಾನಿಯಾದ ನಷ್ಟ ಪ್ರಮಾಣ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯಲಾಗಿದ್ದು, ಶೀಘ್ರ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಪ್ರಾಕೃತಿಕ ವಿಕೋಪ ನಿಯಂತ್ರಣ ಹಿನ್ನೆಲೆಯಲ್ಲಿ ಕಳೆದ 25 ದಿನಗಳ ಹಿಂದೆಯೇ ಜಿಲ್ಲಾ ಮಟ್ಟದ ಮುಂಜಾಗ್ರತಾ ಸಭೆ ನಡೆಸಿದ್ದೆ. ಬೀಳುವ ಹಂತದಲ್ಲಿರುವ ಮರಗಳನ್ನು ಕಡಿಯುವಂತೆ ಸೂಚಿಸಿದ್ದೆ. ಹೀಗಾಗಿ ಅರಣ್ಯ ಇಲಾಖೆ ವತಿಯಿಂದ 500ರಿಂದ 600 ಮರಗಳನ್ನು ತೆರವು ಮಾಡಲಾಗಿದೆ. ಶಾಲೆಯ ಪಕ್ಕ ಇರುವ ವಿದ್ಯುತ್ ತಂತಿ ತೆರವು ಮಾಡಲು ಮೆಸ್ಕಾಂನವರಿಗೆ ಈ ಮೊದಲೇ ಸೂಚನೆ ಕೊಟ್ಟಿದ್ದೇನೆ. ಅಪಾಯಕಾರಿ ವಿದ್ಯುತ್ ತಂತಿ ತೆರವುಗೊಳಿಸಲಾಗಿದೆ ಎಂದರು.
ನಗರದಲ್ಲಿ ಚರಂಡಿಯಿಂದ ಸಮಸ್ಯೆ ಆಗಿತ್ತು, ಇದೀಗ ಸ್ವಚ್ಛಗೊಳಿಸಲಾಗಿದೆ. ಕಾಲುಸಂಕಗಳ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿದೆ. ಜಿಲ್ಲಾಡಳಿತದಿಂದ ಹೆಲ್ಪ್ ಲೈನ್ ತೆರೆಯಲಾಗಿದೆ.
ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡುವ ವಿಚಾರದಲ್ಲಿ ಯಾವುದೇ ತಾರತಮ್ಯ ಆಗಿಲ್ಲ ಎಂದು ಸಚಿವೆ ಹೆಬ್ಬಾಳ್ಕರ್ ಸ್ಪಷ್ಟ ಪಡಿಸಿದರು.
ಈ ಸಂದರ್ಭದಲ್ಲಿ ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ, ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಕುಂದಾಪುರ ಉಪವಿಭಾಗಾಧಿಕಾರಿ ಎಸ್.ಆರ್. ರಶ್ಮಿ, ಡಿಎಫ್ಒ ಗಣಪತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಕ್ಷ ಪ್ರಮುಖರಾದ ವೆರೊನಿಕಾ ಕರ್ನೇಲಿಯೊ, ಡಾ. ಸುನಿತಾ ಶೆಟ್ಟಿ ಮೊದಲಾದವರಿದ್ದರು.
ಅಧಿಕಾರಿಗಳೊಂದಿಗೆ ಸಭೆ
ಬಳಿಕ ಗೃಹ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಜೊತೆ ಸಭೆ ನಡೆಸಿ, ಹೆಚ್ಚಿನ ಮಾಹಿತಿ ಪಡೆದುಕೊಂಡರು.