ರೈತರು ಸೈನಿಕರಂತೆ ಶಿಕ್ಷಕರು ದೇಶದ ನಿರ್ಮಾತೃಗಳು
Thursday, September 5, 2024
ಲೋಕಬಂಧುನ್ಯೂಸ್ ಡೆಸ್ಕ್, ಬೆಂಗಳೂರು
ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆ ಬ್ಯಾಂಕ್ವೆಟ್ ಹಾಲ್ನಲ್ಲಿ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ದೇಶದ ಎರಡನೆಯ ರಾಷ್ಟ್ರಾಧ್ಯಕ್ಷರಾಗಿದ್ದ ರಾಧಾಕೃಷ್ಣನ್ ಶ್ರೇಷ್ಠ ಶಿಕ್ಷಕರಾಗಲು ಸಾಧ್ಯವಾಗಿರುವಾಗ ಎಲ್ಲಾ ಶಿಕ್ಷಕರಿಗೂ ಅದು ಖಂಡಿತ ಸಾಧ್ಯ. ಹಾಗಾಗಿ ಪ್ರತಿಯೊಬ್ಬ ಶಿಕ್ಷಕರೂ ರಾಧಾಕೃಷ್ಣನ್ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಬೇಕು ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವ ರೂಪಿಸುವ ಮೂಲಕ ದೇಶದ ವ್ಯಕ್ತಿತ್ವವನ್ನು ರೂಪಿಸುವವರು ನಮ್ಮ ಶಿಕ್ಷಕರು. ಇದು ಶಿಕ್ಷಕರ ಮೂಲಭೂತ ಜವಾಬ್ದಾರಿ ಎಂದರು.
ಆಕಸ್ಮಿಕವಾಗಿ ಶಿಕ್ಷಕ ವೃತ್ತಿಗೆ ಬಂದವರಿಗಿಂತ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರೇ ಹೆಚ್ಚು. ಹೀಗೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ ಎಂದರು.
ವಿದ್ಯಾರ್ಥಿಗಳು ಸ್ವತಂತ್ರವಾಗಿ ಯೋಚಿಸುವಂತೆ ರೂಪಿಸುವುದೇ ಶಿಕ್ಷಕರ ಜವಾಬ್ದಾರಿ. ವೈಜ್ಞಾನಿಕತೆ ಮತ್ತು ವೈಚಾರಿಕತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡರೆ ಮಾತ್ರ ಅವರಿಗೆ ಸಮಾಜ ಅರ್ಥ ಆಗುತ್ತದೆ. ಸಮಾಜದ ಸಮಸ್ಯೆಗಳಿಗೆ ಪರಿಹಾರ ರೂಪಿಸುತ್ತಾರೆ ಎಂದರು.
ವಿಜ್ಞಾನ ಓದಿರುವ ವಿದ್ಯಾರ್ಥಿಗಳೂ ಮೌಢ್ಯಕ್ಕೆ ಜೋತು ಬೀಳುವುದು, ಜಾತಿ ತಾರತಮ್ಯ ಮಾಡುವುದಾದರೆ ಅವರಿಗೆ ಲಭಿಸಿದ ಶಿಕ್ಷಣಕ್ಕೆ ಅರ್ಥ ಇರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳನ್ನು ವೈಚಾರಿಕವಾಗಿ ರೂಪಿಸುವ ಜವಾಬ್ದಾರಿ ಶಿಕ್ಷಣ ಮತ್ತು ಶಿಕ್ಷಕರದ್ದಾಗಿದೆ ಎಂದರು.
ಸಾವಿತ್ರಿ ಬಾಯಿ ಫುಲೆ, ಸರ್ವಪಲ್ಲಿ ರಾಧಾಕೃಷ್ಣನ್ ಆದರ್ಶಗಳು ಇಡೀ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಲಿ ಎಂದು ಸಿಎಂ ಹಾರೈಸಿದರು.
ಶಿಕ್ಷಕರ ಸಮಸ್ಯೆಗಳನ್ನು ಶಿಕ್ಷಕರ ಸಂಘದ ಜೊತೆ ಸೇರಿ ಸುದೀರ್ಘವಾಗಿ ಚರ್ಚಿಸಿದ್ದೇನೆ. ಪದವಿಪೂರ್ವ ಶಿಕ್ಷಕರ ಸಮಸ್ಯೆಗಳು ಅರ್ಥವಾಗಿದೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಇದ್ದರು.