ಶಿಕ್ಷಕರ ವೇತನ ಐಎಎಸ್ ಅಧಿಕಾರಿಗಿಂತ ಹೆಚ್ಚಾಗಬೇಕು
Thursday, September 5, 2024
ಲೋಕಬಂಧುನ್ಯೂಸ್ ಡೆಸ್ಕ್, ನವದೆಹಲಿ
2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಬೇಕಾದರೆ ಶಿಕ್ಷಕರ ವೇತನ ಐಎಎಸ್ ಅಧಿಕಾರಿಗಿಂತ ಹೆಚ್ಚಾಗಬೇಕು ಎಂದು ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಮನೀಶ್ ಸಿಸೋಡಿಯಾ ಗುರುವಾರ ಹೇಳಿದ್ದಾರೆ.
ಶಿಕ್ಷಕರ ದಿನಾಚರಣೆ ಅಂಗವಾಗಿ ಇಲ್ಲಿನ ಮುನ್ಸಿಪಲ್ ಕಾರ್ಪೊರೇಷನ್ ಗುರುವಾರ ಆಯೋಜಿಸಿದ್ದ 'ಶಿಕ್ಷಕ ಸಮ್ಮಾನ್ ಸಮಾರೋಹ್' ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ 2047ರ ಭಾರತದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇಂದಿನ ಶಿಕ್ಷಕರು, ಮಕ್ಕಳು 2047ಕ್ಕೆ ಬಹಳ ಮುಖ್ಯ. 2047ರ ಅಭಿವೃದ್ಧಿ ಹೊಂದಿದ ಭಾರತ ಈ ಮಕ್ಕಳ ಮೇಲೆ ಅವಲಂಬಿತವಾಗಿದೆ ಎಂದರು.
ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಶಿಕ್ಷಕರ ಸಂಬಳ ಅಲ್ಲಿನ ಅಧಿಕಾರಶಾಹಿಗಳಿಗಿಂತ ಹೆಚ್ಚಾಗಿದೆ. ಐದು ವರ್ಷಗಳ ಅನುಭವ ಹೊಂದಿರುವ ಶಿಕ್ಷಕ ಒಬ್ಬ ಐಎಎಸ್ ಅಧಿಕಾರಿಗಿಂತ ಹೆಚ್ಚಿನ ಸಂಬಳ ಪಡೆಯುತ್ತಾರೆ ಎಂದ ಸಿಸೋಡಿಯಾ ಅವರು ಜರ್ಮನಿ, ಸ್ವಿಟ್ಜರ್ಲೆಂಡ್ ಮತ್ತು ಇತರ ಕೆಲವು ದೇಶಗಳನ್ನು ಉದಾಹರಿಸಿದರು.