
ಎಡನೀರು ಶ್ರೀಗಳ ವಾಹನ ತಡೆದು ಹಲ್ಲೆಗೆ ಯತ್ನ
Monday, November 4, 2024
ಲೋಕಬಂಧು ನ್ಯೂಸ್, ಕಾಸರಗೋಡು
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದಭಾರತೀ ಸ್ವಾಮೀಜಿ ಪ್ರಯಾಣಿಸುತ್ತಿದ್ದ ವಾಹನ ತಡೆದು ಶ್ರೀಗಳಿಗೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ.
ನ.3ರ ಸಂಜೆ ಬೋವಿಕಾನ- ಇರಿಯಣ್ಣಿ ಮಾರ್ಗ ಮಧ್ಯೆ ಶ್ರೀಗಳು ತೆರಳುತ್ತಿದ್ದಾಗ ವಾಹನ ತಡೆದು ಪುಂಡರ ಗುಂಪೊಂದು ತಗಾದೆ ಎಬ್ಬಿಸಿತ್ತು. ಶ್ರೀಗಳು ಪ್ರಯಾಣ ಮುಂದುವರಿಸಿದ್ದರು.
ಕಾರ್ಯಕ್ರಮ ಮುಗಿಸಿ ಶ್ರೀಗಳು ಅದೇ ಮಾರ್ಗದಲ್ಲಿ ಮರಳುತ್ತಿರುವಾಗ ಇರಿಯಣ್ಣಿಯಿಂದಲೇ ಹಿಂಬಾಲಿಸಿದ ಬಂದ ಪುಂಡರು, ಬಾವಿಕೆರೆ ಎಂಬಲ್ಲಿ ಶ್ರೀಗಳ ವಾಹನಕ್ಕೆ ದೊಣ್ಣೆಯಿಂದ ಹೊಡೆದ ಪರಿಣಾಮ ಕಾರಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಶ್ರೀಪಾದರು ಕಾರು ನಿಲ್ಲಿಸದೇ ಶಾಂತರಾಗಿ ಮುಂದುವರಿದರು ಎನ್ನಲಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಹಿಂದೂ ಐಕ್ಯವೇದಿ ಸಂಘಟನೆ, ಘಟನೆಯನ್ನು ಖಂಡಿಸಿದೆ. ನ.5ರಂದು ಸಂಜೆ 5 ಘಂಟೆಗೆ ಬೋವಿಕಾನದಲ್ಲಿ ಪ್ರತಿಭಟನೆಗೆ ಕರೆ ನೀಡಿದೆ.
ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಎಡನೀರು ಮಠದ ಶ್ರೀಗಳ ವಾಹನ ತಡೆದು, ಆಕ್ರಮಣ ನಡೆಸಿರುವ ಹಿಂದಿನ ಉದ್ದೇಶವೇನೆಂದು ಪ್ರಶ್ನಿಸಿರುವ ಹಿಂದೂ ಐಕ್ಯವೇದಿ ಸಂಘಟನೆ, ಎಡನೀರು ಶ್ರೀಗಳ ಸಂಚಾರಕ್ಕೆ ತಡೆಯೊಡ್ಡಿದಲ್ಲಿ ಪರಿಸ್ಥಿತಿ ನೆಟ್ಟಗಿರದು ಎಂದು ಎಚ್ಚರಿಕೆ ನೀಡಿದೆ.