.jpg)
ಕನ್ನಡ ಭಾಷೆ ಪ್ರತಿಯೊಬ್ಬರ ಹೆಗ್ಗಳಿಕೆ
Wednesday, November 6, 2024
ಲೋಕಬಂಧು ನ್ಯೂಸ್, ಉಡುಪಿ
ಕನ್ನಡ ನಾಡು ನುಡಿಯ ಕುರಿತು ಅಭಿಮಾನ ಮೂಡಿಸುವ ಉದ್ದೇಶದಿಂದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ಪ್ರತೀ ಜಿಲ್ಲೆಗಳಿಗೆ ಸಂಚರಿಸುತ್ತಿದ್ದು, ಅನೇಕ ಶತಮಾನಗಳ ಇತಿಹಾಸ ಹೊಂದಿದ ಕನ್ನಡ ನಾಡು ಹಾಗೂ ಕನ್ನಡ ಭಾಷೆ ಪ್ರತಿಯೊಬ್ಬರ ಹೆಗ್ಗಳಿಕೆಯಾಗಿದೆ ಎಂದು ಡಾ.ಕೆ.ವಿದ್ಯಾಕುಮಾರಿ ಹೇಳಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಗೆ ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಸ್ವಾಗತಿಸಿ, ಚಂಡೆ ಬಾರಿಸುವ ಮೂಲಕ ಜಿಲ್ಲೆಯಲ್ಲಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ಪರಂಪರೆ ದೇಶದ ಪ್ರಾಚೀನ ಪರಂಪರೆಗಳಲ್ಲೊಂದಾಗಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ. ಕನ್ನಡ ನುಡಿಯನ್ನು ಕಟ್ಟುವ ಉಳಿಸಿ ಬೆಳೆಸುವ ಕಾಯಕದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದ ಅವರು, 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 20ರಿಂದ 22ರ ವರೆಗೆ ಮಂಡ್ಯದಲ್ಲಿ ನಡೆಯಲಿದೆ. ಜಿಲ್ಲೆಯ ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆದಿತ್ತು. ಮುಂಬರುವ ಡಿಸೆಂಬರ್ ನಲ್ಲಿ ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕನ್ನಡ ಭಾಷೆಯ ಸೊಗಡನ್ನು ಎಲ್ಲೆಡೆ ಪಸರಿಸುವ ಜೊತೆಗೆ ಮಾತೃಭಾಷೆಯ ಕುರಿತು ಭಾಷಾಭಿಮಾನ ಬೆಳೆಸಿಕೊಂಡು ಕನ್ನಡ ನಾಡು ನುಡಿ ಹಾಗೂ ಸಂಸ್ಕೃತಿಯ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಬದ್ಧರಾಗಿ ಕಾರ್ಯನಿರ್ವಹಿಸಬೇಕು ಎಂದರು.
ಮೆರವಣಿಗೆಯ ಮೂಲಕ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯನ್ನು ಬೀಳ್ಕೋಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ನಗರಾಭಿವೃಧ್ದಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು ಮೊದಲಾದವರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಮಾ ಸ್ವಾಗತಿಸಿ, ನಿರೂಪಿಸಿದರು. ಕ.ಸಾ.ಪ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ವಂದಿಸಿದರು.