.jpg)
Udupi: ಕೃಷ್ಣನ ಉಡುಪಿಯಲ್ಲಿ ಜನ್ಮಾಷ್ಟಮಿ ಸಡಗರ
Saturday, September 13, 2025
ಲೋಕಬಂಧು ನ್ಯೂಸ್, ಉಡುಪಿ
ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಸೆ.14ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು 15ರಂದು ಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ನಡೆಯಲಿದೆ.
ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ದ್ವಿತೀಯಾರ್ಧದಲ್ಲಿ ನಡೆಯುವ ಕೃಷ್ಣ ಜನ್ಮಾಷ್ಟಮಿ ಮಹೋತ್ಸವವನ್ನು ಕಳೆದ ಆ.1ರಿಂದ ಸೆ. 17ರ ವರೆಗೆ 48 ದಿನಗಳ ಪರ್ಯಂತ ಕೃಷ್ಣ ಮಂಡಲೋತ್ಸವ ಎಂಬುದಾಗಿ ಆಚರಿಸಲಾಗುತ್ತಿದ್ದು, ಸೌರಮಾನ ಪದ್ಧತಿಯಂತೆ ಕೃಷ್ಣಮಠದಲ್ಲಿ ಸೆ.14ರಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ.
ಸಿದ್ಧತೆ ಪೂರ್ಣ
ಅದಕ್ಕಾಗಿ ಸಿದ್ಧತೆ ಪೂರ್ಣಗೊಂಡಿದ್ದು, ಮೊಸರು ಕುಡಿಕೆ ಉತ್ಸವಕ್ಕೆ ರಥಬೀದಿಯ ಸುತ್ತಲೂ ತ್ರಿಕೋನಾಕೃತಿಯ ಮರದ 13 ಗುರ್ಜಿಗಳನ್ನು ನಿರ್ಮಿಸಲಾಗಿದೆ. ವಿಟ್ಲಪಿಂಡಿ ರಥೋತ್ಸವ ಸಂದರ್ಭದಲ್ಲಿ ಶ್ರೀಕೃಷ್ಣ ಮಠದಲ್ಲಿ ಗೋವುಗಳನ್ನು ನೋಡಿಕೊಳ್ಳುವ ಗೋವಳರು ಮೊಸರು ಕುಡಿಕೆ ಒಡೆಯುವ ಕಾಯಕ ನಿರ್ವಹಿಸುತ್ತಾರೆ.
ಎಲ್ಲೆಲ್ಲಿದೆ ಗುರ್ಜಿ?
ವ್ಯಾಸರಾಜ ಮಠದ ಮುಂಭಾಗ, ಕೃಷ್ಣ ಮಠದ ಮುಂಭಾಗ ಮತ್ತು ಕನಕ ಗೋಪುರದ ಮುಂಭಾಗ ಎರಡು ದಿಕ್ಕಿನಲ್ಲಿ ಬೃಹತ್ ಮಂಟಪದ ಗುರ್ಜಿ ನಿರ್ಮಿಸಲಾಗಿದೆ. ಉಳಿದಂತೆ ಅಷ್ಟಮಠಕ್ಕೆ ಸಂಬಂಧಿಸಿದ 8, ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ 2 ಗುರ್ಜಿಗಳು, 3 ಮಂಟಪ ಗುರ್ಜಿಗಳು ಸೇರಿ ಒಟ್ಟು 13 ಗುರ್ಜಿಗಳನ್ನು ರಚಿಸಲಾಗಿದೆ.
ಪ್ರತೀ ಗುರ್ಜಿಗಳಲ್ಲಿ ತಲಾ ಮೂರು ಕುಡಿಕೆ ಇರಿಸಲಾಗುತ್ತಿದ್ದು ಕುಡಿಕೆಗಳಲ್ಲಿ ಮೊಸರು, ಅರಳಿನ ಹುಡಿ, ಅರಿಶಿಣ- ಕುಂಕುಮದ ನೀರು ತುಂಬಿಸಲಾಗುತ್ತದೆ. ದೊಡ್ಡ ಮಡಕೆಗಳಲ್ಲಿ ಅರಳಿನ ಹುಡಿ ಮತ್ತು ತೆಂಗಿನಕಾಯಿ ಇಡಲಾಗುತ್ತದೆ.
ಕೃಷ್ಣಮಠವನ್ನು ವಿವಿಧ ಹೂವುಗಳು ಮತ್ತು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.
ಕೃಷ್ಣ ಮಂತ್ರ ಜಪ
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಭಾನುವಾರ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ `ಸ್ವಾಮಿ ಶ್ರೀಕೃಷ್ಣಾಯ ನಮಃ' ಮಂತ್ರ ಜಪಾನುಷ್ಠಾನ ನಡೆಯಲಿದೆ. ಬೆಳಗ್ಗೆ 9.30ರಿಂದ ರಾಜಾಂಗಣ, ಮಧ್ವಮಂಟಪ, ಅನ್ನಬ್ರಹ್ಮ ಮೊದಲಾದ ಕಡೆಗಳಲ್ಲಿ ವಿವಿಧ ವಯೋಮಿತಿಯ ಮಕ್ಕಳ ಕೃಷ್ಣವೇಷ ಸ್ಪರ್ಧೆ ಆಯೋಜಿಸಲಾಗಿದೆ.
ಸಂಜೆ 5ರಿಂದ ರಾಜಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ನಡೆಯಲಿದೆ. 6 ಗಂಟೆಗೆ ಕೃಷ್ಣಾವತಾರ ಉಪನ್ಯಾಸ, 7 ಗಂಟೆಗೆ 'ಶ್ರೀಕೃಷ್ಣ ಪುತ್ರ ವಿವಾಹೋತ್ಸವ' ಯಕ್ಷಗಾನ, 11 ಗಂಟೆಗೆ ಪರ್ಯಾಯ ಶ್ರೀಪಾದರಿಂದ ವಿಶೇಷ ಪೂಜೆ, 12.11ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ನೆರವೇರಲಿದೆ.
ಲಕ್ಷ ಸಂಖ್ಯೆಯ ಉಂಡೆ, ಚಕ್ಕುಲಿ
ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಉಪವಾಸದ ಕಾರಣ ಮಠದಲ್ಲಿ ಭೋಜನ ಪ್ರಸಾದ ಇಲ್ಲ. ರಾತ್ರಿ ಪೂಜೆ ವೇಳೆಗೆ ಕೃಷ್ಣನಿಗೆ ಉಂಡೆ, ಚಕ್ಕುಲಿ ಸಮರ್ಪಿಸಿ ಮರುದಿನ ಭಕ್ತಾದಿಗಳಿಗೆ ವಿತರಿಸಲಾಗುವುದು.
ವಿಟ್ಲಪಿಂಡಿ
ಸೆ.15ರಂದು 3 ಗಂಟೆಗೆ ಶ್ರೀಕೃಷ್ಣ ಲೀಲೋತ್ಸವ ಆರಂಭವಾಗಲಿದೆ. ಉತ್ಸವಕ್ಕಾಗಿ ಮೃಣ್ಮಯಮೂರ್ತಿ ಸಿದ್ಧವಾಗಿದೆ.
ಯಾವುದೇ ಅವಘಡಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.
ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಈಗಾಗಲೇ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿದ್ದು, ಪರ್ಯಾಯ ಪುತ್ತಿಗೆ ಮಠ ಹಾಗೂ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ನಡೆಯಲಿದೆ.
10 ಕಡೆಗಳಲ್ಲಿಆಲಾರೇ ಗೋವಿಂದ
ಮುಂಬೈಯ ಬಾಲಮಿತ್ರ ಮಂಡಳಿಯ ಸುಮಾರು 120 ಮಂದಿ ಆಲಾರೇ ಗೋವಿಂದ ಕಲಾವಿದರು ಆಗಮಿಸಿದ್ದು, ಉಡುಪಿ ನಗರದ 10 ಕಡೆಗಳಲ್ಲಿ ಮೊಸರು ಕುಡಿಕೆ ಒಡೆಯುವ ಮೈನವಿರೇಳಿಸುವ ಸಾಹಸ ಪ್ರದರ್ಶಿಸಲಿದ್ದಾರೆ.