-->
ಕೇಂದ್ರ ಸರ್ಕಾರ ಪ್ರಜಾಪಾಲನೆಯಲ್ಲಿ ರಾಜಧರ್ಮ ಪಾಲಿಸಲಿ

ಕೇಂದ್ರ ಸರ್ಕಾರ ಪ್ರಜಾಪಾಲನೆಯಲ್ಲಿ ರಾಜಧರ್ಮ ಪಾಲಿಸಲಿ

ಲೋಕಬಂಧು ನ್ಯೂಸ್, ಉಡುಪಿ
ವಕ್ಪ್ ಗೆ ಕೇವಲ ಮುಸ್ಲಿಮರು ಮಾತ್ರವಲ್ಲದೇ ಹಿಂದೂಗಳು, ಛತ್ರಪತಿ ಶಿವಾಜಿಯಂಥ ರಾಜ‌ಮಹಾರಾಜರೂ ಭೂಮಿ ದಾನ ಮಾಡಿದ್ದಾರೆ. ಈ ರೀತಿ ನೀಡಲಾದ ದಾನಗಳನ್ನು ಈಗ ಕಾನೂನು ರೂಪಿಸಿ ಹಿಂಪಡೆಯುವುದು ಕಾನೂನಾತ್ಮಕ ದರೋಡೆಯಾಗುತ್ತದೆಯೇ, ಹೊರತು ನ್ಯಾಯವಾಗುವುದಿಲ್ಲ. ಕೇಂದ್ರ ಸರಕಾರ ವಕ್ಫ್ ಹೆಸರಿನಲ್ಲಿ ವಿಭಜನೆ ರಾಜಕೀಯಕ್ಕೆ ಬದಲಾಗಿ ಸೌಹಾರ್ದತೆ ಸಾಮರಸ್ಯ ಭರಿತ ಸಮಾಜ ನಿರ್ಮಾಣದಲ್ಲಿ ಬದ್ಧತೆ ಮತ್ತು ಪ್ರಜಾಪಾಲನೆಯಲ್ಲಿ ರಾಜಧರ್ಮ ಪಾಲಿಸಬೇಕು ಎಂದು ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆ ವಕ್ತಾರ ಮುಷ್ತಾಕ್ ಹೆನ್ನಾಬೈಲ್ ಹೇಳಿದರು.
ಮಂಗಳವಾರ ಇಲ್ಲಿನ ಜಾಮೀಯಾ ಮಸೀದಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.


ಮುಸ್ಲಿಂ ಸಮುದಾಯವೇ ಹೊಣೆ
ದೇಶದಲ್ಲಿ ಅಧಿಕೃತ ದಾಖಲೆ ಇರುವ ಸುಮಾರು 9 ಲಕ್ಷ ಎಕರೆಯಷ್ಟು ವಕ್ಫ್ ಭೂಮಿ ಇದೆ. ಇದು ನಿಜವಾದ ವಕ್ಫ್ ಭೂಮಿಗಿಂತ ಬಹಳ ಕಡಿಮೆಯಾಗಿದ್ದು, ಉಳಿದ ಭೂಮಿಯನ್ನು ನುಂಗಿದ್ದು ಮುಸ್ಲಿಮರೇ ಹೊರತು, ಹಿಂದೂಗಳಲ್ಲ. ವಕ್ಫ್ ಆಸ್ತಿಯ ಕಬಳಿಕೆ, ಕಳಪೆ ನಿರ್ವಹಣೆಗೆ ಮುಸ್ಲಿಂ ಸಮುದಾಯವೇ ಹೊಣೆ ಎಂದ ಅವರು, ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿ ಮಾಡಹೊರಟಿರುವುದು ಆಕ್ಷೇಪಾರ್ಹ.


ಇದೀಗ ಪ್ರಚಾರ ನಡೆಸಲಾಗುತ್ತಿರುವಷ್ಟು ವ್ಯಾಪಕವಾಗಿ ವಕ್ಫ್ ಆಸ್ತಿಯ ಅಕ್ರಮ ನೋಂದಣಿಯಾಗಿಲ್ಲ. ಕೇವಲ ಉಪ ಚುನಾವಣೆ ರಾಜಕೀಯಕ್ಕಾಗಿ ಈ ರೀತಿ ಸುಳ್ಳು ಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.


ವಕ್ಫ್ ನಲ್ಲಿ ನೋಂದಾಯಿಸಲ್ಪಟ್ಟಿರುವ ಭೂಮಿಯಲ್ಲಿ ವಕ್ಫ್ ಅಲ್ಲದ ಭೂಮಿ ಕೂಡಾ ಸೇರಿರುವ ಸಾಧ್ಯತೆ ಇದೆ. ಆದರೆ, ಇದು ಹೀಗೆ ನೋಂದಾಯಿಸಿದ ಕಂದಾಯ ಇಲಾಖೆಯ ಸಮಸ್ಯೆಯೇ ಹೊರತು ವಕ್ಫ್ ಮಂಡಳಿಯ ಸಮಸ್ಯೆ ಎಲ್ಲ ಎಂದವರು ಸ್ಪಷ್ಟಪಡಿಸಿದರು.


ಹಿಂದೂಗಳು ದೇವಾಲಯದ ಸುತ್ತಮುತ್ತಲಿ ಭೂಮಿಯನ್ನು ದಾನ ಬಿಡುತ್ತಾರೆ, ಅದರ ಉಸ್ತುವಾರಿ ದೇವಾಲಯಗಳಿಗೆ ಸುಲಭವಾಗುತ್ತದೆ. ಆದರೆ, ಮುಸ್ಲಿಮರು ಎಲ್ಲೆಂದರಲ್ಲಿ ಭೂಮಿಯನ್ನು ದಾನ ಮಾಡುತ್ತಾರೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳುವುದು, ಗುರುತಿಸುವುದು ಮಸೀದಿ ಮತ್ತು ವಕ್ಫ್ ಮಂಡಳಿಗೆ ಕಷ್ಟಕರವಾಗಿದೆ. ಆದ್ದರಿಂದ ನಿಜವಾಗಿ ದಾನ ಮಾಡಲಾದ ಭೂಮಿಗಿಂತಲೂ ಎಷ್ಟೋ ಪಾಲು ಕಡಿಮೆ ಭೂಮಿ ವಕ್ಪ್ ನಲ್ಲಿ ನೋಂದಾಯಿಸಲ್ಪಟ್ಟಿದೆ.


ವಕ್ಫ್ ಭೂಮಿ ನೋಂದಣಿ ಹೆಸರಿನಲ್ಲಿ ರೈತರಿಗೆ ಅನ್ಯಾಯವಾಗಬಾರದು ಎಂದೂ ಹೆನ್ನಾಬೈಲ್ ತಿಳಿಸಿದರು.


ಹಿಂದೂ ವಕೀಲರೇ ಅಧಿಕ
ವೇದಿಕೆಯ ಮಾಜಿ ಅಧ್ಯಕ್ಷ, ವಕೀಲ ಅನೀಸ್ ಪಾಶಾ ಮಾತನಾಡಿ, ದೇಶದಲ್ಲಿ ಫೋಕ್ಸೊ, ದೌರ್ಜನ್ಯ ಇತ್ಯಾದಿಗಳಿಗೆ ಪ್ರತ್ಯೇಕ ನ್ಯಾಯಾಲಯಗಳಿರುವಂತೆ ವಕ್ಪ್ ಗೂ ಪ್ರತ್ಯೇಕ ನ್ಯಾಯಲಯ ಇದೆ. ಇದು ದೇಶದ ಸಂವಿಧಾನದಡಿಯಲ್ಲಿಯೇ ಸರಕಾರ ನೇಮಿಸುವ ಸಿಬ್ಬಂದಿ, ನ್ಯಾಯಾಧೀಶರಿಂದಲೇ ನಡೆಯುತ್ತವೆ. ಅದರಲ್ಲಿ ಹಿಂದೂ ನ್ಯಾಯಾಧೀಶರೇ ಅಧಿಕ ಮಂದಿ ಇದ್ದಾರೆ.


ಆದರೂ ವಕ್ಫ್ ನ್ಯಾಯಾಲಯಗಳ ಬಗ್ಗೆ ಅಪಪ್ರಚಾರ ನಡೆಸಲಾಗುತ್ತದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಸುದ್ದಿಗೋಷ್ಟಿಯಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಅಧ್ಯಕ್ಷ, ನಿವೃತ್ತ ಡಿವೈಎಸ್ಪಿ ಸೊಹೈಲ್ ಅಹ್ಮದ್ ಮರೂರ್, ಕಾರ್ಯದರ್ಶಿ ಡಾ. ಹಕೀಮ್ ತೀರ್ಥಹಳ್ಳಿ, ಗೌರವಾಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ರಿಯಾಝ್ ಅಹಮದ್, ನಝೀರ್ ಬೆಳುವಾಯಿ, ಮುಬಾರಕ್ ಗುಲ್ವಾಡಿ, ಜಮೀರ್ ಅಹ್ಮದ್ ರಶದಿ, ಮುಜಾಫರ್ ಹುಸೈನ್, ಜಿಯಾವುಲ್ಲಾ ಖಾನ್
ಮೌಲಾನಾ ಅಬ್ದುಲ್ ಹಫೀಝ್ ಕಾರ್ಕಳ ಮೊದಲಾದವರಿದ್ದರು.

Ads on article

Advertise in articles 1

advertising articles 2

Advertise under the article