ಸುಳ್ಳು ಆರೋಪಕ್ಕೆ ಸತ್ಯ ತಿಳಿಸಿದ್ದೇನೆ
Wednesday, November 6, 2024
ಲೋಕಬಂಧು ನ್ಯೂಸ್, ಮೈಸೂರು
ಮುಡಾ ಸಂಬಂಧ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದ್ದು, ಲೋಕಾಯುಕ್ತ ವಿಚಾರಣೆಯಲ್ಲಿ ಸತ್ಯ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಬುಧವಾರ ಲೋಕಾಯುಕ್ತ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಲೋಕಾಯುಕ್ತ ವಿಚಾರಣೆಗೆ ಹಾಜರಾಗಿ, ಅವರ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದ್ದೇನೆ ಎಂದರು.
ಬಿಜೆಪಿಯವರು ಗೋಬ್ಯಾಕ್ ಸಿಎಂ ಎಂಬ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿ, ಸ್ನೇಹಮಯಿ ಕೃಷ್ಣ ಕೋರಿದಂತೆ ರಾಜ್ಯಪಾಲರ ಆದೇಶದಂತೆ ಲೋಕಾಯುಕ್ತ ವಿಚಾರಣೆ ನಡೆಸಲಾಗಿದೆ. ಬಿಜೆಪಿಯವರು ವಿಚಾರಣೆಯ ವಿರುದ್ಧವಾಗಿದ್ದಾರೆ ಎಂಬ ಅರ್ಥವಲ್ಲವೇ? ಅದರಿಂದ ಈ ಆರೋಪ ಸುಳ್ಳು ಎಂದು ಸ್ಪಷ್ಟವಾಗುತ್ತದೆ ಎಂದರು.
ವಿಚಾರಣೆ ನಡೆಸುವ ಲೋಕಾಯುಕ್ತ ನಂಬಿಕೆಯಿಲ್ಲ, ತನಿಖೆಯನ್ನು ಸಿಬಿಐ ನಡೆಸಬೇಕೆಂಬ ಬಿಜೆಪಿ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದಲ್ಲಿ ಸಿಬಿಐ ಇದೆ. ಬಿಜೆಪಿಯವರು ಇದುವರೆಗೆ ಯಾವುದಾದರೂ ಹಗರಣವನ್ನು ಸಿಬಿಐಗೆ ವಹಿಸಿದ್ದಾರೆಯೇ ಎಂದು ಸಿಎಂ ಪ್ರಶ್ನಿಸಿದರು.
ಬಿಜೆಪಿಯವರಿಗೆ ಕಾನೂನಿನ ಬಗ್ಗೆ ಗೌರವವಿಲ್ಲ
ಲೋಕಾಯುಕ್ತ ವಿಚಾರಣೆ ಪೂರ್ವನಿಯೋಜಿತವಾಗಿ, ನಿಷ್ಪಕ್ಷವಾಗುತ್ತದೆ ಎಂಬ ಬಿಜೆಪಿ ಆರೋಪ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಸಿಬಿಐಯಂತೆ ಲೋಕಾಯುಕ್ತವೂ ಸ್ವತಂತ್ರ ತನಿಖಾ ಸಂಸ್ಥೆ. ಲೋಕಾಯುಕ್ತ ಬಗ್ಗೆ ನಂಬಿಕೆಯಿಲ್ಲದ ಬಿಜೆಪಿಯವರಿಗೆ ಕಾನೂನಿನ ಬಗ್ಗೆ ಗೌರವವಿಲ್ಲ.
ಬಿಜೆಪಿಯವರು ಯಾವುದೇ ಪ್ರಕರಣವನ್ನು ಇದುವರೆಗೆ ಸಿಬಿಐ ಗೆ ನೀಡಿಲ್ಲ. ರಾಜ್ಯಪಾಲರು ಕೂಡ ಲೋಕಾಯುಕ್ತದಲ್ಲಿಯೇ ತನಿಖೆಯಾಗಬೇಕೆಂದು ಸೂಚಿಸಿದ್ದು, ಅದರಂತೆ ವಿಚಾರಣೆ ನಡೆಯುತ್ತಿದೆ ಎಂದರು.
ಸುಳ್ಳು ಆರೋಪಗಳಿಗೆ ತಕ್ಕ ಉತ್ತರ
ಮುಡಾದಿಂದ ಹಂಚಿಕೆಯಾದ 14 ನಿವೇಶನಗಳು ಕಾನೂನುಬದ್ಧವಾಗಿತ್ತೇ, ಅವುಗಳನ್ನು ವಾಪಸ್ಸು ನೀಡಲಾಯಿತೇಕೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಿವೇಶನ ಹಂಚಿಕೆ ಕಾನೂನು ಬದ್ಧವಾಗಿಯೇ ಆಗಿದೆ. ಬಿಜೆಪಿ- ಜೆಡಿಎಸ್ ನವರು ಸುಳ್ಳು ಆರೋಪ ಮಾಡಿದ್ದಾರೆ. ಈ ಸಂಬಂಧ ಲೋಕಾಯುಕ್ತ ವಿಚಾರಣೆಯಲ್ಲಿ ಇಂದು ಉತ್ತರ ನೀಡಿದ್ದು, ತನಿಖೆಯನ್ನು ಕಾನೂನುರೀತ್ಯಾ ಮುಂದುವರಿಸಲಿದ್ದಾರೆ.
ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದರಿಂದ ನನ್ನ ಪತ್ನಿ ನಿವೇಶನಗಳನ್ನು ವಾಪಸ್ಸು ನೀಡಿದರೇ ಹೊರತು, ತಪ್ಪು ಮಾಡಿದ್ದಕ್ಕಾಗಿ ನಿವೇಶನಗಳನ್ನು ವಾಪಸ್ಸು ನೀಡಲಾಗಿಲ್ಲ.
ಕಪ್ಪು ಮಸಿ ಇಲ್ಲ
ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ನನ್ನ ಬಳಿ ಇಲ್ಲ ಹಾಗೂ ನನ್ನಿಂದ ಯಾವುದೇ ದಾಖಲೆ ಕೇಳಲಾಗಿಲ್ಲ. ನ್ಯಾಯಾಲಯದಲ್ಲಿ ತೀರ್ಮಾನವಾಗುವ ವರೆಗೆ ನನ್ನ ರಾಜಕೀಯ ಜೀವನಕ್ಕೆ ಯಾವುದೇ ಕಪ್ಪು ಮಸಿ ಇಲ್ಲ.
ನನ್ನ ಮೇಲೆ ಮಾಡಲಾಗಿರುವ ಸುಳ್ಳು ಆರೋಪಗಳಿಗೆ ನ್ಯಾಯಾಲಯದಲ್ಲಿ ತಕ್ಕ ಉತ್ತರ ನೀಡಲಿದ್ದೇವೆ ಎಂದು ಸಿಎಂ ಸಿದ್ಶರಾಮಯ್ಯ ಹೇಳಿದರು.