
ನಿವೃತ್ತ ನೌಕರನ ಗೋಳಿಗೆ ಕಿವುಡಾದ ಅಧಿಕಾರಿಗಳು!
Tuesday, November 5, 2024
ಲೋಕಬಂಧು ನ್ಯೂಸ್, ಉಡುಪಿ
ಸುಮಾರು 38 ವರ್ಷ ಕಾಲ ಮೀನುಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿರುವ ನನ್ನ ಸೇವಾ ಅವಧಿಯಲ್ಲಿ ಒಂದು ವೇತನ ಭಡ್ತಿಯನ್ನು ದಿಢೀರಾಗಿ ಕಡಿತಗೊಳಿಸಲಾಗಿದೆ ಎಂದು ನಿವೃತ್ತ ಉದ್ಯೋಗಿ ಎನ್. ರಾಮ ಭಟ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಯಾವುದೇ ಭಡ್ತಿ ಇಲ್ಲದೇ 35 ವರ್ಷಗಳ ಸೇವೆಯ ಬಳಿಕ 2019ರಲ್ಲಿ ತನಗೆ ಹಿರಿಯ ವೇತನ ಶ್ರೇಣಿಗೆ ಭಡ್ತಿ ದೊರಕಿತ್ತು. ಆದರೆ, 2023ರಲ್ಲಿ ಸೇವಾ ನಿವೃತ್ತಿ ಸಂದರ್ಭದಲ್ಲಿ ಕರ್ನಾಟಕದ ಮಹಾಲೇಖಪಾಲರು ನಿಯಮ ಉಲ್ಲೇಖಿಸಿ ಒಂದು ವೇತನ ಭಡ್ತಿಯನ್ನು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕಡಿತಗೊಳಿಸಿದ್ದಾರೆ ಎಂದು ಉಡುಪಿ ಬಳಕೆದಾರರ ವೇದಿಕೆಯಲ್ಲಿ ಟ್ರಸ್ಟಿಯೂ ಆಗಿರುವ ರಾಮ ಭಟ್ ದೂರಿದರು.
ತನ್ನ ಸಹೋದ್ಯೋಗಿಯೊಬ್ಬರಿಗೆ ಅದೇ ನಿಯಮದಡಿ, ಅದೇ ರೀತಿ ಸನ್ನಿವೇಶದಲ್ಲಿ ಯಾವುದೇ ಆಕ್ಷೇಪವಿಲ್ಲದೆ ಪಿಂಚಣಿ ಅನುಮೋದನೆ ನೀಡಿರುವುದನ್ನು ಉಲ್ಲೇಖಿಸಿದ ರಾಮ ಭಟ್, ಈ ವಿಷಯದಲ್ಲಿ ನನಗೆ ಮಾತ್ರ ಅನ್ಯಾಯವಾಗಿದೆ ಎಂದರು.
ನ್ಯಾಯಕ್ಕಾಗಿ ತಾನು ಕಳೆದ 18 ತಿಂಗಳಿನಿಂದ 50ಕ್ಕೂ ಅಧಿಕ ಪತ್ರ ವ್ಯವಹಾರಗಳನ್ನು ಮಾಡಿದ್ದರೂ ಯಾವುದೇ ಉತ್ತರ ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ತನಗಾದ ಅನ್ಯಾಯದ ಕುರಿತು ಸಿಎಜಿ, ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಗೂ ದೂರಿ ಪತ್ರ ಬರೆದಿದ್ದೇನೆ. ರಾಷ್ಟ್ರಪತಿ ಕಾರ್ಯಾಲಯದಿಂದ ಎರಡು ಬಾರಿ ನೋಟಿಸ್ ನೀಡಿದ್ದರೂ ಮಹಾಲೇಖಪಾಲರು ಅದಕ್ಕೆ ಕ್ಯಾರೇ ಎಂದಿಲ್ಲ.
ಇಲಾಖೆಯ ಆಡಳಿತಾಧಿಕಾರಿ ಕುಮಾರಸ್ವಾಮಿ, ಇಲಾಖೆಯಿಂದ ಆಗಿರುವ ತಪ್ಪನ್ನು ಸರಿಪಡಿಸಲು ಅವಕಾಶವಿದೆ ಎಂದಿದ್ದರೂ ತನಗೆ ಪದೋನ್ನತಿ ನೀಡಿದ ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್ ಅವರೊಂದಿಗೆ ಮಾತನಾಡಿ ಸರಿಪಡಿಸುವಂತೆ ವಿನಂತಿಸಿದ್ದರೂ, ಅವರಿಂದ ಸಕಾರಾತ್ಮಕ ಉತ್ತರ ಲಭಿಸಿಲ್ಲ.
ಇಲಾಖೆಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಈ ಕುರಿತು ಪತ್ರ ಬರೆದು ದೂರಿಕೊಂಡರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಕೊನೆಯ ಅಸ್ತ್ರವಾಗಿ ತಾನು ಇದೀಗ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್, ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ, ಹಿರಿಯ ವಕೀಲ ಎಚ್. ಕೆ. ಮಲ್ಯ, ನಿವೃತ್ತ ಪ್ರಾಂಶುಪಾಲ ಪ್ರೊ. ಸದಾಶಿವ ರಾವ್, ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಉಪಸ್ಥಿತರಿದ್ದರು.