
ಎರಡನೇ ಬಾರಿಗೆ ಶ್ವೇತಭವನಕ್ಕೆ ಟ್ರಂಪ್
Thursday, November 7, 2024
ಲೋಕಬಂಧು ನ್ಯೂಸ್, ವಾಷಿಂಗ್ಟನ್
ಭಾರತ ಮೂಲದ ಡೆಮೋಕ್ರಾಟ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಮತ್ತು ಟ್ರಂಪ್ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಕಮಲಾ ಕೇವಲ 223 ಎಲೆಕ್ಟೊರಲ್ ಕಾಲೇಜ್ ಮತಗಳನ್ನು ಪಡೆದರೆ, ಟ್ರಂಪ್ 279 ಮತಗಳನ್ನು ಪಡೆದು ವೈಟ್ ಹೌಸ್ಗೆ ಎರಡನೇ ಬಾರಿ ಪ್ರವೇಶ ಪಡೆದುಕೊಂಡಿದ್ದಾರೆ.
2019ರಲ್ಲಿ ಹಿಲರಿ ಕ್ಲಿಂಟನ್ ಅವರನ್ನು ಸೋಲಿಸಿ ಅಧ್ಯಕ್ಷ ಸ್ಥಾನ ಗೆದ್ದಿದ್ದ ಟ್ರಂಪ್, 2020ರಲ್ಲಿ ಬೈಡನ್ ಎದುರು ಸೋಲು ಅನುಭವಿಸಿದ್ದರು. ಇದೀಗ ಜನರಲ್ಲಿ ಮನೆ ಮಾಡಿರುವ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಎರಡನೇ ಬಾರಿ ಮತ್ತೊಮ್ಮೆ ಗೆಲುವಿನ ದಡ ತಲುಪಿದ್ದಾರೆ.
ಏಳು ರಾಜ್ಯಗಳನ್ನು ಸ್ವಿಂಗ್ ರಾಜ್ಯಗಳು ಎಂದು ಗುರುತಿಸಲಾಗಿತ್ತು. ಅಲ್ಲಿ ಯಾರಿಗೆ ಹೆಚ್ಚು ಮತಗಳು ಬೀಳುತ್ತವೆಯೋ, ಆ ಪಕ್ಷ ಗೆಲ್ಲುವುದು ಬಹುತೇಕ ಖಚಿತವಾಗಿತ್ತು. ನಾಲ್ಕು ರಾಜ್ಯಗಳಲ್ಲಿ ರಿಪಬ್ಲಿಕನ್ ಗೆದ್ದಿದ್ದು, ಉಳಿದ ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದೆ.
ಪ್ರಮುಖ ರಾಜ್ಯವಾದ ಪೆನ್ಸಿಲ್ವೇನಿಯಾದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ತಮ್ಮ ಬೆಂಬಲಿಗರನ್ನುದ್ದೇಶಿಸಿ ಟ್ರಂಪ್ ವಿಜಯದ ಭಾಷಣ ಮಾಡಿ, ಇದು ಅಮೆರಿಕ ಜನರ ಭವ್ಯವಾದ ಗೆಲುವು ಎಂದು ಬಣ್ಣಿಸಿದ್ದು, ಅಮೆರಿಕವನ್ನು ಸ್ವರ್ಣಯುಗಕ್ಕೆ ಕೊಂಡೊಯ್ಯುವುದಾಗಿ ಭರವಸೆ ನೀಡಿದರು.
ಜುಲೈ 13ರಂದು ತನ್ನ ಮೇಲೆ ನಡೆದಿದ್ದ ಕೊಲೆ ಯತ್ನವನ್ನು ನೆನಪಿಸಿಕೊಂಡ ಅವರು, ದೇವರು ವಿಶೇಷ ಕಾರಣಕ್ಕಾಗಿ ನನ್ನನ್ನು ಉಳಿಸಿರುವುದಾಗಿ ತಿಳಿಸಿದರು. ನನ್ನ ಕೊನೆಯ ಉಸಿರಿನ ತನಕ ಜನರಿಗಾಗಿ ಹೋರಾಡುವುದಾಗಿ ಭರವಸೆ ನೀಡಿದರು.
ಭಾರತದ ಪ್ರಧಾನಿ ನರೇಂದ್ರ ಮೋದಿ, ಫ್ರೆಂಚ್ ಪ್ರಧಾನಿ ಇಮ್ಯಾನ್ಯುಯೆಲ್ ಮೆಕ್ರಾನ್, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕೀ, ನ್ಯಾಟೋ ಸೆಕ್ರೆಟರಿ ಜನರಲ್ ಮಾರ್ಕ್ ರುಟ್, ಇಟೆಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಸೇರಿದಂತೆ ವಿಶ್ವದ ಹಲವು ನಾಯಕರು ಟ್ರಂಪ್ಗೆ ಶುಭಾಶಯ ತಿಳಿಸಿದ್ದಾರೆ.