ದರ್ಶನ್ ಭೇಟಿಗೆ ಏಳು ಮಂದಿಗಷ್ಟೆ ಅವಕಾಶ
Monday, November 4, 2024
ಲೋಕಬಂಧು ನ್ಯೂಸ್, ಬೆಂಗಳೂರು
ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್ ಅವರಿಗೆ ಕೇವಲ 7 ಮಂದಿ ಭೇಟಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.ದರ್ಶನ್ ಕುಟುಂಬದವರ ಮನವಿ ಹಿನ್ನೆಲೆಯಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೇಶ್, ತಾಯಿ ಮೀನಮ್ಮ, ಸಹೋದರ ದಿನಕರ್ ತೂಗುದೀಪ್, ದರ್ಶನ್ ಆಪ್ತ ಧನ್ವೀರ್ ಹಾಗೂ ವಕೀಲರ ತಂಡ ಹೊರತುಪಡಿಸಿ ಯಾರೂ ದರ್ಶನ್ ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲ.
ದರ್ಶನ್ ಅವರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದ್ದು, ಆಸ್ಪತ್ರೆಗೆ ಹೆಚ್ಚು ಮಂದಿ ಬಂದರೆ ಇತರ ರೋಗಿಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ತೊಂದರೆ ಹಾಗೂ ಭದ್ರತೆಯ ಸಮಸ್ಯೆ ಎದುರಾಗುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕುಟುಂಬ ಸಮೇತ ಧನ್ವೀರ್ ಭೇಟಿಗೆ ಮಾತ್ರ ಅವಕಾಶ ನೀಡಲಾಗಿತ್ತು. ದರ್ಶನ್ ಜೈಲಿಗೆ ಹೋದಾಗಿನಿಂದ ಧನ್ವೀರ್, ವಿಜಯಲಕ್ಷ್ಮೀಗೆ ಬೆಂಬಲ ನೀಡುತ್ತಿದ್ದಾರೆ. ವಿಜಯಲಕ್ಷ್ಮೀ ಅವರನ್ನು ಭೇಟಿ ಮಾಡಲು ಧನ್ವೀರ್ ಕೂಡ ಬಳ್ಳಾರಿಗೆ ಬಂದಿದ್ದರು. ಧನ್ವೀರ್ ಅವರನ್ನು ದರ್ಶನ್ ಅವರ ಸಹೋದರನಂತಿರುವುದರಿಂದ ಅವರಿಗೆ ಭೇಟಿ ಮಾಡಲು ಅವಕಾಶ ನೀಡಲಾಗಿದೆ.
ದರ್ಶನ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಬೇಕೋ ಅಥವಾ ಫಿಸಿಯೋಥೆರಪಿ ಮಾಡಬೇಕೋ ಎಂಬುದು ನಿರ್ಧಾರವಾಗಲಿದೆ.
ವೈದ್ಯರು ದರ್ಶನ್ ಪರೀಕ್ಷಾ ವರದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಕುಟುಂಬ ಸದಸ್ಯರು ಹಾಗೂ ದರ್ಶನ್ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ.