ದಿಢೀರ್ ನಿವೃತ್ತಿ ಘೋಷಿಸಿದ ವೃದ್ಧಿಮಾನ್
Monday, November 4, 2024
ಲೋಕಬಂಧು ನ್ಯೂಸ್, ನವದೆಹಲಿ
ಭಾರತೀಯ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ವೃದ್ಧಿಮಾನ್ ಸಾಹ ನಿವೃತ್ತಿ ಘೋಷಣೆ ಮಾಡಿದ್ದಾರೆ.ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ಬಂಗಾಳ ಪರ ಆಡುತ್ತಿರುವ ಸಾಹ ಸೋಮವಾರ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಆ ಮೂಲಕ 17 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ.
ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಸಾಹ 15 ವರ್ಷ ಕಾಲ ಬಂಗಾಳ ಪರ ಮತ್ತು 2 ವರ್ಷ ಕಾಲ ತ್ರಿಪುರಾ ಪರ ಆಡಿದ್ದಾರೆ. ಭಾರತ ಪರ ಒಟ್ಟು 9 ಏಕದಿನ ಪಂದ್ಯವನ್ನಾಡಿದ್ದಾರೆ.
2014ರಲ್ಲಿ ಭಾರತ ಪರ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. 2021ರಲ್ಲಿ ಕೊನೆಯ ಬಾರಿಗೆ ಟೆಸ್ಟ್ ಆಡಿದ್ದರು. ಟೆಸ್ಟ್ ಆಟಗಾರನಾಗಿದ್ದರೂ ಕೂಡ ಐಪಿಎಲ್‌ನಲ್ಲಿ ಸಹಾ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದಾರೆ.
170 ಐಪಿಎಲ್ ಪಂದ್ಯವನ್ನಾಡಿ 2934 ರನ್ ಗಳಿಸಿದ್ದಾರೆ. ಅದರಲ್ಲಿ 1 ಶತಕ ಮತ್ತು 13 ಅರ್ಧ ಶತಕ ಒಳಗೊಂಡಿದೆ.
2010ರಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದ ವೃದ್ಧಿಮಾನ್ ಸಾಹ, ಭಾರತ ಪರ 40 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ 56 ಇನಿಂಗ್ಸ್ ಆಡಿ ಅವರು 3 ಶತಕ ಹಾಗೂ 6 ಅರ್ಧ ಶತಕಗಳೊಂದಿಗೆ ಒಟ್ಟು 1,353 ರನ್ ಕಲೆಹಾಕಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಕೀಪರ್ ಆಗಿದ್ದ ಕಾರಣ ವೃದ್ಧಿಮಾನ್ ಸಾಹಗೆ ಭಾರತ ಪರ ಹೆಚ್ಚಿನ ಪಂದ್ಯವನ್ನಾಡುವ ಅವಕಾಶ ಲಭಿಸಲಿಲ್ಲ.