ಉಡುಪಿಯಲ್ಲಿ ಐಟಿ ಬಿಟಿ ಪಾರ್ಕ್ ಮಂಜೂರಾತಿಗೆ ಮನವಿ
Friday, March 21, 2025
ಲೋಕಬಂಧು ನ್ಯೂಸ್
ಬೆಂಗಳೂರು: ಉಡುಪಿ ಭಾಗದ ಯುವ ಜನತೆಯ ಬಹುದಶಕದ ಬೇಡಿಕೆಯಾಗಿರುವ ಉಡುಪಿಯಲ್ಲಿ ಐಟಿ ಬಿಟಿ ಪಾರ್ಕ್ ಯೋಜನೆ ಮಂಜೂರು ಮಾಡುವಂತೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿ, ಉಡುಪಿ ಶಾಸಕ ಯಶಪಾಲ್ ಸುವರ್ಣ ಮನವಿ ಮಾಡಿದರು.ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ನಿರಂತರ ಉತ್ತಮ ಫಲಿತಾಂಶದೊಂದಿಗೆ ಗಮನಾರ್ಹ ಸಾಧನೆ ಮಾಡಿಕೊಂಡು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಉಡುಪಿ ಜಿಲ್ಲೆ ಭೂ, ಜಲ, ರೈಲ್ವೇ ಮತ್ತು ವಾಯು ಸಾರಿಗೆ ಸಂಪರ್ಕದೊಂದಿಗೆ ನಾಲ್ಕು ವಿಧದ ಅತ್ಯುತ್ತಮ ಸಾರಿಗೆ ಸಂಪರ್ಕ ಹೊಂದಿದ ಜಿಲ್ಲೆಯಾಗಿದೆ. ಪ್ರವಾಸೋದ್ಯಮ, ಮೀನುಗಾರಿಕೆ ಧಾರ್ಮಿಕ ಕೇಂದ್ರ, ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ವ್ಯವಸ್ಥೆ, ಸಹಕಾರ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪೂರ್ಣಗೊಳಿಸಿ, ತೇರ್ಗಡೆ ಹೊಂದುತ್ತಿದ್ದು, ಜಿಲ್ಲೆಯಲ್ಲಿ ವಿದ್ಯಾಭ್ಯಾಸಕ್ಕೆ ಸೂಕ್ತ ಉದ್ಯೋಗ ಅವಕಾಶ ದೊರಕದೆ, ಉದ್ಯೋಗ ಅರಸಿ ಹೊರ ಜಿಲ್ಲೆ ಅಥವಾ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ಇದೆ.
ಜಿಲ್ಲೆಯ ಪ್ರತಿಭಾವಂತ ಪದವೀಧರರಿಗೆ ಸ್ಥಳೀಯವಾಗಿ ಉದ್ಯೋಗದಾವಕಾಶ ಕಲ್ಪಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.
ಜಿಲ್ಲೆಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ, ಉದ್ಯೋಗ ಅರಸಿ ಹೊರ ಊರುಗಳಿಗೆ ವಲಸೆ ಹೋಗುವ ಪದವೀಧರರಿಗೆ ಜಿಲ್ಲೆಯಲ್ಲಿಯೇ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ಮಾಹಿತಿ ತಂತ್ರಜ್ಞಾನ-ಜೈವಿಕ ತಂತ್ರಜ್ಞಾನ ಉದ್ಯಾನವನ (ಐಟಿ-ಬಿಟಿ ಪಾರ್ಕ್) ಯೋಜನೆ ಸರಕಾರ ಅಥವಾ ಖಾಸಗಿ ಸಹಭಾಗಿತ್ವದೊಂದಿಗೆ ಅನುಷ್ಠಾನಗೊಳಿಸಲು ವಿಶೇಷ ಮುತುವರ್ಜಿ ವಹಿಸಿ ಕ್ರಮ ವಹಿಸುವಂತೆ ಸಚಿವರಿಗೆ ಯಶಪಾಲ್ ಸುವರ್ಣ ಮನವಿ ಮಾಡಿದರು.