ಕೃತಕ ಬುದ್ದಿಮತ್ತೆ ಜೀವನದ ಅವಿಭಾಜ್ಯ ಅಂಗ
Wednesday, March 12, 2025
ಲೋಕಬಂಧು ನ್ಯೂಸ್
ಉಡುಪಿ: ಕೃತಕ ಬುದ್ದಿಮತ್ತೆ ಜೀವನದ ಅವಿಭಾಜ್ಯ ಭಾಗವಾಗಿದ್ದು ಮನುಷ್ಯ ಒಂದಿಲ್ಲೊಂದು ಬಗೆಯಲ್ಲಿ ಕೃತಕ ಬುದ್ದಿಮತ್ತೆಯನ್ನು ಉಪಯೋಗಿಸುವ ಪರಿಸ್ಥಿತಿ ಬಂದಿದೆ ಎಂದು ಉಡುಪಿ ಬಿಷಪ್ ಅತಿ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.ಮಂಗಳವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಸಂಪರ್ಕ ಆಯೋಗ ನೇತೃತ್ವದಲ್ಲಿ ಧಾರ್ಮಿಕ ಜೀವನದಲ್ಲಿ ಕೃತಕ ಬುದ್ದಿಮತ್ತೆಯ ಉಪಯೋಗದ ಕುರಿತು ಧರ್ಮಗುರುಗಳಿಗೆ ನಡೆದ ಒಂದು ದಿನದ ಕಾರ್ಯಗಾರ ಉದ್ದೇಶಿಸಿ ಮಾತನಾಡಿದರು.
ಇಂದು ಪ್ರತೀ ಕ್ಷೇತ್ರದಲ್ಲೂ ಕೃತಕ ಬುದ್ದಿಮತ್ತೆಯ ಉಪಯೋಗವನ್ನು ಕಂಡುಕೊಳ್ಳಲಾಗಿದ್ದು ಚರ್ಚಿನ ಧಾರ್ಮಿಕ ಕ್ಷೇತ್ರವೂ ಅದರಿಂದ ಹೊರತಾಗಿಲ್ಲ. ಮುಂದಿನ ದಿನಗಳಲ್ಲಿ ಕೃತಕ ಬುದ್ದಿಮತ್ತೆಯ ಉಪಯೋಗ ಇನ್ನಷ್ಟು ಹೆಚ್ಚಾಗಲಿದ್ದು ಧರ್ಮಗುರುಗಳು ಕೂಡಾ ಅದಕ್ಕೆ ಪೂರಕವಾಗಿ ನಡೆಯಬೇಕಾದ ಅವಶ್ಯಕತೆ ಇದೆ.
ಪ್ರತಿಯೊಂದು ಮಾಹಿತಿ ಬೆರಳಂಚಿನಲ್ಲಿ ಸಿಗಲಿದೆ. ಒಂದು ದಿನವನ್ನು ಉಪಯೋಗಿಸಿಕೊಂಡು ಮಾಡಬೇಕಾದ ಕೆಲಸವನ್ನು ಎಐ ತಂತ್ರಜ್ಞಾನ ಒಂದು ಗಂಟೆಯಲ್ಲಿ ಮಾಡಿ ಮುಗಿಸುತ್ತದೆ. ಅದರ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಕೃತಕ ಬುದ್ದಿಮತ್ತೆಯ ಉಪಯೋಗ, ಸಮಸ್ಯೆ ಮತ್ತು ಪರಿಹಾರದ ಕುರಿತು ಕೆನರಾ ಕಮ್ಯೂನಿಕೇಶನ್ ಮಂಗಳೂರು ನಿರ್ದೇಶಕ ವಂ.ಅನಿಲ್ ಜೆ. ಫೆರ್ನಾಂಡಿಸ್ ಹಾಗೂ ಎಐ ತಂತ್ರಜ್ಞಾನದ ತರಬೇತುದಾರ ಲಿಯೋ ವಿಕ್ಟರ್ ಮಾಹಿತಿ ನೀಡಿದರು.
ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಅನುಗ್ರಹ ನಿರ್ದೇಶಕ ವಂ.ವಿನ್ಸೆಂಟ್ ಕ್ರಾಸ್ತಾ, ವಂ.ಅಶ್ವಿನ್ ಆರಾನ್ಹಾ, ವಂ.ಪಾವ್ಲ್ ರೇಗೊ ಸೇರಿದಂತೆ ಧರ್ಮಪ್ರಾಂತ್ಯದ ವಿವಿಧ ಧರ್ಮಗುರುಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.