-->
ಕಂಡೀಶನ್, ಬ್ಲಾಕ್'ಮೆಲ್ ನನ್ನ ಬ್ಲಡ್'ನಲ್ಲಿಲ್ಲ

ಕಂಡೀಶನ್, ಬ್ಲಾಕ್'ಮೆಲ್ ನನ್ನ ಬ್ಲಡ್'ನಲ್ಲಿಲ್ಲ

ಲೋಕಬಂಧು ನ್ಯೂಸ್
ಉಡುಪಿ: ನಾನು ಯಾರಿಗೂ ಕಂಡೀಶನ್ ಹಾಕಿಲ್ಲ, ಅದರ ಆವಶ್ಯಕತಯೂ ನನಗಿಲ್ಲ. ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ. ಪಕ್ಷ ಏನು ಹೇಳುತ್ತದೆ, ಅಷ್ಟು ಕೆಲಸ ಮಾಡುವವನು. ಅಷ್ಟು ಬಿಟ್ಟರೆ ನಾನು ಬೇರೆ ಏನೂ ಕೆಲಸ ಮಾಡುವುದಿಲ್ಲ. ಕಂಡೀಶನ್, ಬ್ಲಾಕ್'ಮೇಲ್ ನನ್ನ ಬ್ಲಡ್'ನಲ್ಲಿಲ್ಲ, ಐ ಆಮ್ ಎ ಲಾಯಲ್ ಕಾಂಗ್ರೆಸ್ ವರ್ಕರ್ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದರು.ದೆಹಲಿಯಲ್ಲಿ ವರಿಷ್ಠರೊಂದಿಗೆ ಪವರ್ ಶೇರಿಂಗ್ ಚರ್ಚೆ ಬಗ್ಗೆ ಭಾನುವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ನನ್ನ ಡೆಡಿಕೇಶನ್ ಪಕ್ಷಕ್ಕೆ, ಗಾಂಧಿ ಫ್ಯಾಮಿಲಿಗೆ. ನನ್ನ ಬಗ್ಗೆ ಬೇರೊಬ್ಬರು ಏನಾದರೂ ಯೋಚನೆ ಮಾಡುತ್ತಿದ್ದರೆ ಅದು ಅವರ ಭ್ರಮೆ. ಬಿಜೆಪಿಯವರು ಕನ್ಫ್ಯೂಷನ್ ಆಗಲೇಬೇಕು. ಅವರು ಆಗಲಿ, ಎಲ್ಲರೂ ಆಗಲಿ, ನೀವೂ ಕನ್ಫ್ಯೂಸ್ ಆಗಿ ಎಂದು ಪತ್ರಕರ್ತರ ಕಾಲೆಳೆದರು.


ನನ್ನ ಬಗ್ಗೆ ಮಾತನಾಡಿಲ್ಲ ಎಂದರೆ ಕೆಲವರಿಗೆ ಸಮಾಧಾನ ಇರುವುದಿಲ್ಲ. 2028ಕ್ಕೆ ಕಾಂಗ್ರೆಸ್ ಪಾರ್ಟಿ ವಿಲ್ ಕಮ್ ಬ್ಯಾಕ್ ಟು ಪವರ್. ಇಷ್ಟು ಮಾತ್ರ ನಾನು ಹೇಳುತ್ತೇನೆ ಎಂದರು.


ಚಿತ್ರರಂಗದವರು ಬರುವುದಿಲ್ಲ
ಫಿಲಂ ಇಂಡಸ್ಟ್ರೀ ಸತ್ತು ಹೋಯಿತು, ಥಿಯೇಟರ್'ಗಳು ಮುಚ್ಚಿಹೋಯಿತು. ಊಟಕ್ಕೆ ಸಮಸ್ಯೆ ಎನ್ನುವ ಕನ್ನಡ ಚಿತ್ರರಂಗದವರು, ಅವರಿಗಾಗಿ ಸರಕಾರ ಕಾರ್ಯಕ್ರಮ ನಡೆಸಿದರೆ ಅವರು ಬರುವುದಿಲ್ಲ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಯಾರಿಗೋಸ್ಕರ ಮಾಡುವುದು ಎಂದು ಖಾರವಾಗಿ ಪ್ರಶ್ನಿಸಿದರು.


ಇಂಡಸ್ಟ್ರಿ ಎಂದು ಹೇಳಿದರೆ ಕ್ಯಾಮರಾಮೆನ್, ಸ್ಕ್ರಿಪ್ಟ್ ರೈಟರ್, ನಟರು, ನಿರ್ದೇಶಕರು ಎಲ್ಲರೂ ಬರಬೇಕು. ಅವರ ಹಬ್ಬದಲ್ಲಿ ಅವರೇ ಇಲ್ಲ ಎಂದರೆ ಹೇಗೆ? ಚಲನಚಿತ್ರೋತ್ಸವ ಯಾರ ಫಂಕ್ಷನ್? ಅದೇನು ನನ್ನ ಕಾರ್ಯಕ್ರಮವೇ? ಸಿನಿಮಾ ರಂಗದವರು ಏನು ಬೇಕಾದರೂ ಮಾತನಾಡಿಕೊಳ್ಳಲಿ, ನನಗೆ ಗೊತ್ತಿರುವ ಸತ್ಯ ಹೇಳಿದ್ದೇನೆ. ಅವರು ಬೇಕಿದ್ದರೆ ಪ್ರತಿಭಟನೆ ಮಾಡಲಿ, ಹೋರಾಟ ಮಾಡಲಿ ಎಂದರು.


ನಮ್ಮ ನೀರು, ನಮ್ಮ ಹಕ್ಕಿನ ಹೋರಾಟಕ್ಕೂ ಅವರು ಬಂದಿಲ್ಲ. ನೆಲ, ಜಲದ ವಿಚಾರದಲ್ಲಿ ಪಕ್ಷಾತೀತವಾಗಿ ನಾವು ಹೋರಾಟ ಮಾಡಿದ್ದೇವೆ. ಮೇಕೆದಾಟು ಯಾತ್ರೆ ಮಾಡುವಾಗ ಯಾರೂ ಬರಲಿಲ್ಲ, ನೆಲ ಜಲದ ವಿಚಾರದಲ್ಲಿ ಹೋರಾಟ ಮಾಡುತ್ತೇವೆ ಎನ್ನುತ್ತಾರೆ. ಪ್ರೇಮ್, ದುನಿಯಾ ವಿಜಿ, ಸಾಧುಕೋಕಿಲ ಕೇಸು ಹಾಕಿಸಿಕೊಂಡರು. ಬಿಜೆಪಿಯವರು ಅವರ ಮೇಲೆ ಕೇಸು ಹಾಕಿದರು ಎಂದರು.


ಆರ್.ಅಶೋಕ್'ಗೆ ತಿರುಗೇಟು
ಚಲನಚಿತ್ರೋತ್ಸವಕ್ಕೆ ಭಾಗಿಯಾಗಲು ಸಿನೆಮಾದವರು ಕಾಂಗ್ರೆಸ್ ಕಾರ್ಯಕರ್ತರೇ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಟೀಕೆಗೆ ಪ್ರತಿಕ್ರಿಯಿಸಿದ ಡಿಕೆಶಿ ಅವರು, ಆರ್. ಅಶೋಕ್ ಬೇಕಾದರೆ ತಲೆ ಕೆಳಗೆ ಮಾಡಿಕೊಳ್ಳಲಿ. ಕಾಂಗ್ರೆಸ್ ಕಾರ್ಯಕರ್ತರು ಎನ್ನುವ ಆವಶ್ಯಕತೆ ಇಲ್ಲ. ನಾವು ಐಟಿ ಬಿಟಿ, ಇನ್ವೆಸ್ಟರ್ಸ್ ಮೀಟ್ ಮಾಡುತ್ತೇವೆ, ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಎನ್ನಲು ಆಗುತ್ತದೆಯೇ? ಭಾಗ್ಯಲಕ್ಷ್ಮಿ, ಗೃಹ ಜ್ಯೋತಿ ಕಾಂಗ್ರೆಸ್'ನವರಿಗೆ ಮಾತ್ರ ಕೊಡುತ್ತಿದ್ದೇವೆಯೇ ಎಂದು ತಿರುಗೇಟು ನೀಡಿದರು.


ಬಿಜೆಪಿ ಕಾರ್ಯಕರ್ತರು ಯಾರೂ ಗ್ಯಾರಂಟಿ ಯೋಜನೆ ತೆಗೆದುಕೊಳ್ಳಬೇಡಿ ಎಂದು ಕರೆ ಕೊಟ್ಟುಬಿಡಲಿ, ಕಾಂಗ್ರೆಸ್ ಕೊಟ್ಟ ಕಾರ್ಯಕ್ರಮ, ನೀವು ಯಾರೂ ತೆಗೆದುಕೊಳ್ಳಬೇಡಿ ಎಂದು ಹೇಳಲಿ ನೋಡೋಣ ಎಂದು ಸವಾಲೆಸೆದರು.


ಎಲ್ಲಾ ಪಕ್ಷದವರು ಸೌಲಭ್ಯಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಬೇಕಿದ್ರೆ ಹಣ ಕೊಟ್ಟೇ ಬಸ್ಸಿನಲ್ಲಿ ಓಡಾಟ ಮಾಡಲಿ, ಜನರು ಸರಿಯಾಗಿದ್ದಾರೆ. ಆದರೆ, ಬಿಜೆಪಿ ನಾಯಕರಿಗೆ ನಮಗೆ ಅವಕಾಶ ಸಿಕ್ಕಿಲ್ಲ ಎನ್ನುವ ಹೊಟ್ಟೆ ಉರಿ ಎಂದು ಗುಡುಗಿದರು.


ಕುಂಭಮೇಳ ಸಮರ್ಥನೆ
ನೀರಿಗೆ ಜಾತಿ, ಧರ್ಮ ಇದೆಯೇ ಎಂದು ಪ್ರಶ್ನಿಸಿದ ಡಿಕೆಶಿ, ಪವಿತ್ರ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಪ್ರಯಾಗ್'ರಾಜ್'ಗೆ ತೆರಳಿದ್ದೆ ಎಂದು ಕುಂಭಮೇಳ ಭೇಟಿಯನ್ನು ಸಮರ್ಥಿಸಿದರು.


ಪ್ರತ್ಯೇಕ ನೀತಿ
ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಅವರಿಗೆ ಹೇಳಿದ್ದೇನೆ. ಈ ಭಾಗದ ಪ್ರವಾಸೋದ್ಯಮಕ್ಕೆ ವಿಶೇಷ ನೀತಿ ತರಲು ಯೋಚಿಸಲಾಗಿದೆ. ಇಲ್ಲಿನ ಜನರು ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರಿದ್ದಾರೆ. ಕರಾವಳಿಗರು ಪ್ರವಾಸೋದ್ಯಮದ ಮೂಲಕ ಉದ್ಯೋಗ ಪಡೆಯಬೇಕು. ಆ ಮೂಲಕ ಇಲ್ಲಿನ ಪ್ರತಿಭೆಗಳು ವಲಸೆ ಹೋಗುವುದನ್ನು ತಪ್ಪಿಸಬೇಕು ಎಂದರು.

Ads on article

Advertise in articles 1

advertising articles 2

Advertise under the article