ತಪ್ಪಿಸಲೆತ್ನಿಸಿದ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಕಾಲಿಗೆ ಗುಂಡು
Wednesday, March 12, 2025
ಲೋಕಬಂಧು ನ್ಯೂಸ್
ಉಡುಪಿ: ನಟೋರಿಯಸ್ ಗರುಡ ಗ್ಯಾಂಗಿನ ಸದಸ್ಯ ಇಸಾಕ್ ಮೇಲಿನ ಪೊಲೀಸ್ ಗುಂಡು ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಮಾಹಿತಿ ನೀಡಿದ್ದಾರೆ.ಮಣಿಪಾಲ ಠಾಣೆಯ ಅಪರಾಧ ಪ್ರಕರಣವೊಂದರ ಆರೋಪಿ ಇಸಾಕ್ ಹಾಗೂ ಇತರರ ಬಂಧನಕ್ಕಾಗಿ ಮಣಿಪಾಲ ಮತ್ತು ಮಲ್ಪೆ ಪೊಲೀಸರ ತಂಡ ರಚಿಸಲಾಗಿದ್ದು, ಆರೋಪಿ ಇಸಾಕ್ ನನ್ನು ಬುಧವಾರ ಮಧ್ಯಾಹ್ನ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿ ಇಸಾಕ್ ಸೇರಿದಂತೆ ಒಟ್ಟು ನಾಲ್ವರನ್ನು ದಸ್ತಗಿರಿ ಮಾಡಲಾಗಿತ್ತು.
ಈ ಎಲ್ಲಾ ನಾಲ್ವರು ಆರೋಪಿಗಳನ್ನು ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಮಣಿಪಾಲಕ್ಕೆ ಕರೆತರುವಾಗ ಉಡುಪಿ ಜಿಲ್ಲೆಯ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆಅಂಗಡಿ ಬಳಿ ರಾತ್ರಿ ಸುಮಾರು 7.15ರ ವೇಳೆಗೆ ಆರೋಪಿ ಇಸಾಕ್ ತನಗೆ ತುರ್ತಾಗಿ ವಾಂತಿ ಹಾಗೂ ಮೂತ್ರ ವಿಸರ್ಜನೆ ಮಾಡಲೇಬೇಕೆಂದು ಹಠ ಹಿಡಿದು, ಕರೆತರುತ್ತಿದ್ದ ವಾಹನವನ್ನು ನಿಲ್ಲಿಸಿದ್ದು, ಮೂತ್ರ ವಿಸರ್ಜನೆ ನಂತರ ಏಕಾಏಕಿ ಆತನೊಂದಿಗಿದ್ದ ಉಡುಪಿ ಪೊಲೀಸ್ ನಗರ ಪೊಲೀಸ್ ಠಾಣೆಯ ಸಿಬ್ಬಂದಿಯವರನ್ನು ತಳ್ಳಿ ಹಲ್ಲೆ ನಡೆಸಿದ. ಆತನ ಕೈಗೆ ಅಳವಡಿಸಲಾಗಿದ್ದ ಲೀಡಿಂಗ್ ಚೈನ್'ನಿಂದ ಪೊಲೀಸರನ್ನು ತಳ್ಳಿದ್ದ. ಇಬ್ಬರು ಪೊಲೀಸ್ ಉಪನಿರೀಕ್ಷಕರು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಅವರಿಗೆ ಬಲವಾಗಿ ಒದ್ದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ.
ಹೀಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಆತನ ಲೀಡಿಂಗ್ ಚೈನ್, ಫೋಲೀಸ್ ವಾಹನದ ಎದುರಿನ ಗ್ಲಾಸಿಗೆ ಬಡಿದು, ಗ್ಲಾಸ್ ಒಡೆದು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗಾಯಗಳಾಗಿವೆ ಎಂದು ಎಸ್.ಪಿ. ತಿಳಿಸಿದ್ದಾರೆ.
ಈ ವೇಳೆ ಮಣಿಪಾಲ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ದೇವರಾಜ್ ಎಚ್ಚರಿಕೆ ನೀಡಿದ್ದು, ಇಸಾಕ್ ಕೇಳದೇ ಇದ್ದಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಅದಕ್ಕೂ ಜಗ್ಗದ ಇಸಾಕ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿ ಇಸಾಕ್ ಕಾಲಿಗೆ ಗುಂಡು ಹಾರಿಸಲಾಗಿದೆ.
ಗಾಯಗೊಂಡ ಇಸಾಕ್ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್.ಪಿ. ಡಾ. ಅರುಣ್ ತಿಳಿಸಿದ್ದಾರೆ.