-->
ಹಿರಿಯರ ಆದರ್ಶಗಳೇ ಕಿರಿಯರಿಗೆ ಸ್ಪೂರ್ತಿ

ಹಿರಿಯರ ಆದರ್ಶಗಳೇ ಕಿರಿಯರಿಗೆ ಸ್ಪೂರ್ತಿ

ಲೋಕಬಂಧು ನ್ಯೂಸ್
ಉಡುಪಿ: ಇಲ್ಲಿನ ಹಿರಿಯ ವಕೀಲ ದಿ.ವಿ.ಮೋಹನ್ ದಾಸ್ ಶೆಟ್ಟಿ ಭಾವಚಿತ್ರ ಅನಾವರಣ ಉಡುಪಿ ವಕೀಲರ ಸಂಘದಲ್ಲಿ ಉಡುಪಿ ವಕೀಲರ ಸಂಘದ ವತಿಯಿಂದ ಸೋಮವಾರ ನಡೆಯಿತು.ಹೈಕೋರ್ಟ್ ನ್ಯಾಯಮೂರ್ತಿ ನ್ಯಾ| ಸಿ.ಎಂ.ಜೋಶಿ ಅನಾವರಣಗೊಳಿಸಿ, ವೃತ್ತಿಯಲ್ಲಿ ಆದರ್ಶ ಮತ್ತು ನೈಪುಣ್ಯತೆಯಿಂದ ಬದುಕು ಸಾಧಿಸಿದ ವ್ಯಕ್ತಿಯನ್ನು ಕಳೆದುಕೊಂಡಾಗ ಕುಟುಂಬ ವರ್ಗ, ಆತ್ಮೀಯರು ಹಾಗೂ ಸಮಾಜಕ್ಕೆ ದೊಡ್ಡ ನಷ್ಟ. ಹಿರಿಯ ವಕೀಲರನ್ನು ಕಳೆದುಕೊಂಡಾಗ ಇತ್ತೀಚೆಗೆ ಕಾನೂನು ವೃತ್ತಿಯಲ್ಲಿ ಹೆಜ್ಜೆ ಇರಿಸಿದ ವೃತ್ತಿಪರರೂ ನಷ್ಟ ಅನುಭವಿಸುತ್ತಾರೆ ಎಂದರು.


ಹಿರಿಯ ವಕೀಲರ ಆದರ್ಶಗಳೇ ಕಿರಿಯ ವಕೀಲರಿಗೆ ಪ್ರೇರಣೆ ನೀಡುತ್ತವೆ. ಆ ವ್ಯಕ್ತಿಗಳ ಆದರ್ಶಗಳನ್ನು ಅಳವಡಿಸಿಕೊಂಡು ವೃತ್ತಿ ಮುಂದುವರಿಸಿದರೆ ಯಶಸ್ಸು ಲಭಿಸಲು ಸಾಧ್ಯ ಎಂದರು.


ವ್ಯಕ್ತಿಯನ್ನು ಕಳೆದುಕೊಂಡಾಗ ಕುಟುಂಬಸ್ಥರು, ಆತ್ಮೀಯರಿಗೆ ನೋವಾಗುವುದು ಸಹಜ. ಮೃತ ವ್ಯಕ್ತಿಯ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಎಂಬ ಮಾನಸಿಕ ಸಿದ್ದತೆಯಿಂದ ದುಃಖವನ್ನು ಮರೆಯಬೇಕು ಎಂದರು.


ಆದರ್ಶ ವ್ಯಕ್ತಿತ್ವಗಳನ್ನು ಕಳೆದುಕೊಂಡಾಗ ವೃತ್ತಿಗೂ ಘಾಸಿಯಾಗುತ್ತದೆ.


ಶ್ರೀಕೃಷ್ಣ ಇಂದು ಇಲ್ಲ. ಆತನ ಉಪದೇಶಗಳು ಸಹಸ್ರಾರು ವರ್ಷಗಳಿಂದ ಪ್ರಚಲಿತದಲ್ಲಿದೆ. ಅಂತೆಯೇ ವ್ಯಕ್ತಿಯೋರ್ವ ವೃತ್ತಿಯಲ್ಲಿ ಮಾಡಿದ ಸಾಧನೆಯಿಂದಾಗಿ ಮುಂದಿನ ಪೀಳಿಗೆ ಆದರ್ಶ ವ್ಯಕ್ತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ ಎಂದವರು ಹೇಳಿದರು.


ವೃತ್ತಿಯಲ್ಲಿ ಆದರ್ಶ ಮಾತ್ರ ಇದ್ದರೆ ಸಾಲದು, ನೈಪುಣ್ಯತೆಯೂ ಅಗತ್ಯ. ಅದನ್ನು ಸಮಾಜದ ಒಳಿತಿಗಾಗಿ ಉಪಯೋಗಿಸಿಕೊಳ್ಳಬೇಕು.


50 ವರ್ಷದ ಹಿಂದಿನ ವಕೀಲ ವೃತ್ತಿಗೂ, ಇಂದಿನ ಕಾಲಘಟ್ಟದ ವೃತ್ತಿಗೂ ಬಹಳಷ್ಟು ವ್ಯತ್ಯಾಸ ಇದೆ. ಗುರು ಮುಖೇನ ಅನೇಕ ಸಂಗತಿಗಳನ್ನು ಕಲಿಯಬೇಕು. ಶಾಲಾ, ಕಾಲೇಜುಗಳಲ್ಲಿ ಕೌಶಲ್ಯಗಳನ್ನು ಹೇಳಿಕೊಡಲು ಸಾಧ್ಯವಿಲ್ಲ. ಇವೆಲ್ಲವೂ ಹಿರಿಯ ವಕೀಲರ ಮೂಲಕ ಕಲಿಯವಂತಹದ್ದು ಎಂದರು.


ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್ ಎಸ್. ಗಂಗಣ್ಣವರ್ ಮಾತನಾಡಿ, ಸಮಾಜದಲ್ಲಿರುವ ಅನೇಕ ವೃತ್ತಿಗಳಲ್ಲಿ ಆರಂಭದಲ್ಲೇ ಆದಾಯ ಇರುತ್ತದೆ. ಆದರೆ, ವಕೀಲ ವೃತ್ತಿಯಲ್ಲಿ ಆರಂಭದಲ್ಲಿ ಆದಾಯ, ಕೇಸು ಬರುವುದಿಲ್ಲ. ನಿಧಾನವಾಗಿ ಪ್ರಕರಣ ಬಂದರೂ ಆದಾಯ ಬರುವುದಿಲ್ಲ. ನಂತರ ಪ್ರಕರಣ, ಆದಾಯ ಒಟ್ಟಿಗೆ ಬರುತ್ತದೆ. ಅದೇ ರೀತಿ ದಿ.ಮೋಹನ್ ದಾಸ್ ಶೆಟ್ಟಿ ಕೆಲಸದ ನ್ಯೆಪುಣ್ಯ ಮತ್ತು ವ್ಯಕ್ತಿತ್ವದಿಂದ ಸಮಾಜ ಅವರನ್ನು ಗುರುತಿಸಿತ್ತು. ಅದು ಮತ್ತಷ್ಟು ಜನರಿಗೆ ಸಿಗಬೇಕಿತ್ತು.


ವೃತ್ತಿಯ ಬಗ್ಗೆ ಎಲ್ಲರಿಗೂ ಪ್ರತಿಯೊಂದು ಕನಸುಗಳಿರುತ್ತವೆ. ದಿನಗಳು ಕಳೆದಂತೆ ವಿವಿಧ ಸಾಧನೆಗಳು ಮಾಡಲು ಸಾಧ್ಯವಿದೆ. ಉತ್ಕೃಷ್ಟ ಗುಣಗಳನ್ನು ಅಳವಡಿಸಿಕೊಂಡಾಗ ಸಾರ್ಥಕ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದರು.


ದಿ.ಮೋಹನ್ ದಾಸ್ ಶೆಟ್ಟಿ ಪತ್ನಿ ರಶ್ಮಿ ಎಮ್ ಶೆಟ್ಟಿ ಉಪಸ್ಥಿತರಿದ್ದರು.


ವಕೀಲ ಆನಂದ್ ಮಡಿವಾಳ ಪ್ರಸ್ತಾವನೆಗೈದರು. ಇಂಚರ ಶಿವಪುರ ಪ್ರಾರ್ಥಿಸಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ವಕೀಲೆ ಸಹನಾ ಕುಂದರ್ ನಿರೂಪಿಸಿದರು

Ads on article

Advertise in articles 1

advertising articles 2

Advertise under the article