-->
ಕರ್ತವ್ಯದಿಂದ ನಾಯಕನ ವರ್ಚಸ್ಸು ವೃದ್ಧಿ

ಕರ್ತವ್ಯದಿಂದ ನಾಯಕನ ವರ್ಚಸ್ಸು ವೃದ್ಧಿ

ಲೋಕಬಂಧು ನ್ಯೂಸ್
ಉಡುಪಿ: ಇಲ್ಲಿನ ವಕೀಲರ ಸಂಘದ 125ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಎಂ.ಜಿ‌.ಎಂ ಮೈದಾನದಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟಕ್ಕೆ ತೆರೆಬಿದ್ದಿದೆ.ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಮಾತನಾಡಿ, ಉಡುಪಿ ವಕೀಲರ ಸಂಘ ನಿತ್ಯದ ಕಾರ್ಯಗಳೊಂದಿಗೆ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಿಭಾಯಿಸಿದೆ. ವಕೀಲರ ಬೇಡಿಕೆಗಳಿಗೆ ಕೊನೆ ಇರುವುದಿಲ್ಲ. ಕ್ರೀಡೆ ಹಾಗೂ ನ್ಯಾಯಾಂಗದಲ್ಲಿ ತುಡಿತ ಇದ್ದಾಗ ಹೊಸ ವಿಚಾರಗಳು ಬರುತ್ತವೆ. ಅಂಥ ಮನಸ್ಸುಗಳಿಂದ ಇಂಥ ಬದಲಾವಣೆ ತರಲು ಸಾಧ್ಯ ಎಂದರು.


ಕ್ರೀಡಾಕೂಟದಿಂದ ವಕೀಲರ ವೃತ್ತಿ ಹಾಗೂ ವ್ಯಕ್ತಿತ್ವದ ಅನಾವರಣ ಆಗಿದೆ. ಕ್ರೀಡೆಯ ಚುರುಕುತನವನ್ನು ನ್ಯಾಯ ನೀಡುವಲ್ಲಿಯೂ ಇರಬೇಕು.‌ ಕ್ರೀಡಾಪಟುಗಳಿಗೆ ಗುಣಮಟ್ಟದ ಸೇವೆ, ಸೌಲಭ್ಯಗಳನ್ನು ಉಡುಪಿ ವಕೀಲರ ಸಂಘ ಒದಗಿಸಿದೆ. ಕ್ರೀಡಾಕೂಟದಲ್ಲಿ ವರ್ಷಂಪ್ರತಿ ಕ್ರೀಡಾಪಟುಗಳ ಪಾಲ್ಗೊಳ್ಳುವಿಕೆ ಹೆಚ್ಚಳವಾಗುತ್ತಿರುವುದು ಸಂತೋಷದಾಯಕವಾಗಿದೆ ಎಂದರು.


ನಾನು ನೋಡಿರುವಂತೆ ಅನೇಕ ಕಡೆಗಳಲ್ಲಿ ಹಿರಿಯ ವಕೀಲರು ಗ್ರಂಥಾಲಯ, ಕೆಲವು ವಕೀಲರು ಕ್ರೀಡಾಂಗಣದಲ್ಲಿ ಸಮಯ ಕಳೆಯುತ್ತಾರೆ. ಅಂತೆಯೇ ವೈದ್ಯರು, ಇಂಜಿನಿಯರ್‌ಗಳು ಪ್ರತಿದಿನ ದೈಹಿಕ ಚಟುವಟಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಧೂಳು, ಬಿಸಿಲಿನಲ್ಲಿ ಆಟ ಆಡುವುದು ಒಂದು ದಿನದಲ್ಲಿ ಸಾಧ್ಯವಿಲ್ಲ. ಅದಕ್ಕಾಗಿ ದೈಹಿಕ ಹಾಗೂ ಮಾನಸಿಕ ತಯಾರಿ ಅಗತ್ಯ ಎಂದರು.


ಸೂರ್ಯನನ್ನು ಧರೆಗಿಳಿಸುವ ಸಾಮರ್ಥ್ಯ
ಸಾಮಾನ್ಯವಾಗಿ ಹುದ್ದೆಯಿಂದ ವ್ಯಕ್ತಿಗೆ ಗೌರವ ದೊರಕುತ್ತದೆ. ಆದರೆ, ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಮಾಡುವ ಕಾರ್ಯಗಳಿಂದ ಅವರ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೂರ್ಯನನ್ನು ಧರೆಗಿಳಿಸುವ ಸಾಮರ್ಥ್ಯ ಅವರಲ್ಲಿದೆ. ಅವರ ನಾಯಕತ್ವದ ತಂಡ ಕ್ರೀಡಾಕೂಟವನ್ನು ಅದ್ಬುತವಾಗಿ ಸಂಘಟಿಸುವಲ್ಲಿ ಯಶಸ್ವಿಯಾಗಿದೆ ಎಂದು ಉಡುಪಿ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಧೀಶ ಕಿರಣ್ ಎಸ್.ಗಂಗಣ್ಣವರ್ ಪ್ರಶಂಸೆ ವ್ಯಕ್ತಪಡಿಸಿದರು.


ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ ಮಾತನಾಡಿ, ಕರಾವಳಿ ಭಾಗದಲ್ಲಿ ಹೈಕೋರ್ಟಿನ ವಿಭಾಗೀಯ ಪೀಠ ಸ್ಥಾಪಿಸಬೇಕೆಂಬ ಬೇಡಿಕೆಗೆ ಉಡುಪಿ ವಕೀಲರ ಸಂಘದ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಈ ಬೇಡಿಕೆಯೂ ಹೋರಾಟದ ಸ್ವರೂಪ ಪಡೆದುಕೊಳ್ಳಲಿದ್ದು, ಅದಕ್ಕೆ ಉಡುಪಿ ವಕೀಲರು ಹಾಗೂ ಸಂಘದ ಬೆಂಬಲ ಯಾಚಿಸಿದರು.


ಪೋಕ್ಸೋ ವಿಶೇಷ ನ್ಯಾಯಾಲಯದ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶ ಶ್ರೀನಿವಾಸ್ ಸುವರ್ಣ, ಹಿರಿಯ ವಕೀಲ ಎಮ್.ಶಾಂತಾರಾಮ್ ಶೆಟ್ಟಿ, ಎಮ್‌ಐಟಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಮಲ್ಯ, ಉಡುಪಿ ವಕೀಲರ ಸಂಘದ ಉಪಾಧ್ಯಕ್ಷ, ಕ್ರೀಡಾಕೂಟದ ಸಂಚಾಲಕ ಮಿತ್ರ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.


ಇಂಚರ ಶಿವಪುರ ಪ್ರಾರ್ಥಿಸಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ವಕೀಲೆ ಸಹನಾ ಕುಂದರ್ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article