ಜಾತಿ ರಾಜಕಾರಣ ಬಿಟ್ಟು ಪಕ್ಷ ಸಂಘಟಿಸಿ
Sunday, March 2, 2025
ಲೋಕಬಂಧು ನ್ಯೂಸ್
ಉಡುಪಿ: ಜಾತಿ ರಾಜಕಾರಣ ಮಾಡುವುದನ್ನು ಬಿಟ್ಟು ಪಕ್ಷ ಬಲಪಡಿಸಬೇಕು. ಡಿ.ಕೆ. ಶಿವಕುಮಾರ್ ಬಣ ಅಥವಾ ಇನ್ಯಾವುದೋ ನಾಯಕರ ಬಣ ಮಾಡಬೇಡಿ. ಎಲ್ಲರದ್ದೂ ಒಂದೇ ಬಣ, ಅದು ಕಾಂಗ್ರೆಸ್ ಬಣ ಆಗಿರಬೇಕು ಎಂದು ಕೈ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.ಭಾನುವಾರ ಉಡುಪಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಮೂರು ತಿಂಗಳಲ್ಲಿ ಜಿಲ್ಲಾ ಕಾಂಗ್ರೆಸ್ ಸರಿ ಆಗಬೇಕು. ನಾಯಕರು ಪಕ್ಷ ಸಂಘಟನೆ ಮಾಡಬೇಕು, ಇಲ್ಲವಾದರೆ ಎಲ್ಲವನ್ನೂ ಬದಲಾವಣೆ ಮಾಡಬೇಕಾಗುತ್ತದೆ ಎಂದರು.
ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ತತ್ವದಡಿ ಕೆಲಸ ಮಾಡಿ. ಕೆಲವು ಸಚಿವರ ನೇತೃತ್ವದಲ್ಲಿ ಒಂದು ಕೋರ್ ಟೀಮ್ ರಚನೆ ಮಾಡಲಾಗಿದೆ. ಸರ್ಕಾರ ಮತ್ತು ಪಕ್ಷ ಜೊತೆಯಾಗಿ ಕೆಲಸ ಮಾಡುವ
ಟೀಮ್ ಅದಾಗಿದ್ದು, ಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದರು.
ಕೆಪಿಸಿಸಿ ಹೆಸರಲ್ಲೇ ಆರ್.ಟಿ.ಸಿ ಕಡ್ಡಾಯ
ರಾಜ್ಯದಲ್ಲಿ ವಿಧಾನಸಭಾವಾರು ನೂರು ಹೊಸ ಕಾಂಗ್ರೆಸ್ ಕಚೇರಿ ತೆರೆದು ಸೇವೆ ಕೊಡಬೇಕು ಎಂಬ ಯೋಜನೆ ಹಮ್ಮಿಕೊಳ್ಳಲಾಗಿದೆ. ಮುಂದಿನ ತಿಂಗಳು ಬೆಂಗಳೂರಲ್ಲಿ ರಾಹುಲ್ ಗಾಂಧಿ ವರ್ಚ್ಯವಲ್ ಆಗಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಬೆಂಗಳೂರಿನಲ್ಲಿ 3 ಹೊಸ ಕಚೇರಿ ಪ್ರಾರಂಭವಾಗಲಿದೆ. ಹೊಸ ಕಚೇರಿಯ ಜಾಗ ಕೆಪಿಸಿಸಿ ಹೆಸರಲ್ಲೇ ನೋಂದಣಿ ಆಗಿರುವುದು ಕಡ್ಡಾಯ. ವೈಯಕ್ತಿಕ ಹೆಸರಿನಲ್ಲಿರುವ ಜಾಗದಲ್ಲಿ ಕಚೇರಿ ಪ್ರಾರಂಭಿಸಲು ಅವಕಾಶವಿಲ್ಲ ಎಂದರು.
ಎಲ್ಲಾ ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಚಿಕ್ಕಮಗಳೂರಿನಲ್ಲಿ 5ಕ್ಕೆ 5, ಉ.ಕ, ಕೊಡಗಿನಲ್ಲೂ ಗೆದ್ದಿದ್ದೇವೆ. ಆದರೆ, ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಬಂದಿಲ್ಲ. ಜಿಲ್ಲೆಯಲ್ಲಿ ಐದೂ ಶಾಸಕ ಸ್ಥಾನ ಸೋಲಿಗೆ ಏನು ಕಾರಣ ಎಂಬುದನ್ನು ಗಮನಹರಿಸಬೇಕು. ಇತ್ತೀಚಿನ ಸರ್ವೇ ಪ್ರಕಾರ ಈ ಹಿಂದೆ ಸೋತ 60 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಅವಕಾಶವಿದೆ. ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು.
ನನ್ನ ಕ್ಷೇತ್ರದಲ್ಲಿ 99 ಶೇ. ಬ್ರಾಹ್ಮಣರು ನನಗೆ ಮತ ಹಾಕುತ್ತಾರೆ. ನಿಮಗೆ ಯಾಕೆ ಸಿಗುವುದಿಲ್ಲ. ಬ್ರಾಹ್ಮಣರು ಬಿಜೆಪಿಗೆ ಮಾತ್ರ ಮತ ಹಾಕುತ್ತಾರೆ ಎಂಬ ಮೂಢನಂಬಿಕೆ ಬಿಡಿ ಎಂದರು.
ಶಿಳ್ಳೆ ಹೊಡೆಯುವುದನ್ನು ಬಿಡಿ
ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಮಾತಿಗೆ ಮುನ್ನ ಶಿಳ್ಳೆ ಹೊಡೆದ ಕಾಂಗ್ರೆಸ್ ಕಾರ್ಯಕರ್ತರಿಗೆ ಶಿಳ್ಳೆ ಹೊಡೆಯುವುದನ್ನು ಬಿಡಿ. ಕಾಂಗ್ರೆಸ್ ಕಚೇರಿ ದೇವಸ್ಥಾನ ಇದ್ದಂತೆ. ಪಕ್ಷಕ್ಕೆ, ಕಚೇರಿಗೆ ಗೌರವ ಕೊಡಬೇಕು ಎಂದು ಡಿಕೆಶಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಹೀರೊಗಳೆಲ್ಲ ಝೀರೊ ಆಗಿದ್ದಾರೆ
ಗುಂಪುಗಾರಿಕೆ ಮಾಡಿದ ಹೀರೊಗಳು ಝೀರೊ ಆಗಿದ್ದಾರೆ, ಝೀರೊಗಳು ಹೀರೊ ಆಗಿದ್ದಾರೆ ಎಂದ ಡಿಸಿಎಂ ಡಿಕೆಶಿ ಜಿ.ಪಂ, ತಾ.ಪಂ ಚುನಾವಣೆ ಬರುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕನಿಷ್ಠ 9 ಸೀಟ್ ಗೆಲ್ಲಲೇಬೇಕು ಎಂಬ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಯುವ ಕಾಂಗ್ರೆಸ್ ಚುನಾವಣೆ ನಡೆದಿದ್ದು, ಹಲವರು ಗೆದ್ದಿದ್ದೀರಿ. ನೀವು ಗೆದ್ದಿರುವುದು ಬಿಜೆಪಿ ವಿರುದ್ದ ಅಲ್ಲ, ಕಾಂಗ್ರೆಸ್ ಪಕ್ಷದೊಳಗೆ. ಗೆದ್ದವರು, ಸೋತವರನ್ನು ವಿಶ್ವಾಸಕ್ಕೆ ಪಡೆದು ಒಟ್ಟಿಗೆ ಪಕ್ಷದಲ್ಲಿ ಕಾರ್ಯನಿರ್ವಹಿಸಬೇಕು. ಪಕ್ಷದೊಳಗೆ ಗುಂಪುಗಾರಿಕೆ ಮಾಡಬೇಡಿ, ಬಿಟ್ಟು ಬಿಡಿ. ಪಕ್ಷದಲ್ಲಿ ವ್ಯಕ್ತಿ ಪೂಜೆ ಮಾಡುವುದನ್ನು ಬಿಟ್ಟು, ಪಕ್ಷ ಪೂಜೆ ಮಾಡಿ ಎಂದರು.
ಸಭೆಯಲ್ಲಿ ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ ಮತ್ತು ವಿನಯ್ ಕುಮಾರ್ ಸೊರಕೆ, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಮತ್ತು ಐವನ್ ಡಿ'ಸೋಜಾ, ಮಾಜಿ ಶಾಸಕ ಗೋಪಾಲ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ ಮೊದಲಾದವರಿದ್ದರು.