ಕೊರಗ ಸಮುದಾಯದ ಅಭಿವೃದ್ಧಿಗೆ ಆದ್ಯತೆ ಅಗತ್ಯ
Tuesday, March 11, 2025
ಲೋಕಬಂಧು ನ್ಯೂಸ್
ಕಾಪು: ಬುಡಕಟ್ಟು ಜನಾಂಗವಾದ ಕೊರಗ ಸಮುದಾಯ ಅತಿ ಹಿಂದುಳಿದ ಸಮುದಾಯವಾಗಿದ್ದು, ಪಿ.ವಿ.ಟಿ.ಜಿ (ಅಳಿವಿನಂಚಿನ ಸಮುದಾಯ) ಎಂದು ಗುರುತಿಸಲ್ಪಟ್ಟಿದ್ದು ಸಮುದಾಯದ ಜನಸಂಖ್ಯೆ ದಿನದಿಂದ ದಿನಕ್ಕೆ ತೀವ್ರ ಗತಿಯಲ್ಲಿ ಕುಸಿಯುತ್ತಿರುವುದು ಖೇದಕರ, ಈ ನಿಟ್ಟಿನಲ್ಲಿ ಸರ್ಕಾರ ಆದ್ಯತೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.ಶಿರ್ವ ಪೆರ್ನಾಲ್'ನಲ್ಲಿ ಕೊರಗರ ಅಭಿವೃದ್ಧಿ ಸಂಘದ ಸಂಘಗಳ ಒಕ್ಕೂಟ, ಕರ್ನಾಟಕ ಕೇರಳ ಮತ್ತು ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲ್ ಸಂಯೋಜನೆಯಲ್ಲಿ ನಡೆದ ವಿಶ್ವ ಮಹಿಳೆಯರ ದಿನಾಚರಣೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ತತ್ವ ಸಿದ್ಧಾಂತಗಳು ಕೊರಗರ ಸಾಮಾಜಿಕ ನ್ಯಾಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಔದ್ಯೋಗಿಕ ಪ್ರಗತಿ ಸಾಧ್ಯವಾಗಿಲ್ಲ. ಸರ್ಕಾರ ಯಾವುದೇ ಯೋಜನೆಗಳನ್ನು ಕೈಗೊಂಡರೂ ಸಮರ್ಪಕವಾಗಿ ಅನುಷ್ಠಾನವಾಗುವಲ್ಲಿ ಮುತುವರ್ಜಿ ವಹಿಸಬೇಕು.
ಕೊರಗರಲ್ಲಿ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯ ಹೆಚ್ಚುವಂತೆ ಮಾಡಿ ಹೆಚ್ಚು ಹೆಚ್ಚು ಅವಕಾಶ ಸೃಷ್ಟಿಸಬೇಕು ಹಾಗೂ ವಿಶೇಷವಾಗಿ ನೇರ ನೇಮಕಾತಿ ಮುಖಾಂತರ ಉದ್ಯೋಗ ನೀಡಬೇಕು.
ಕೊರಗರು ಡಾ.ಬಿ.ಆರ್. ಅಂಬೇಡ್ಕರ್ ಆಶಯದಂತೆ ತಮ್ಮ ಅಭಿವೃದ್ಧಿಗಾಗಿ ನಿರಂತರ ಹೋರಾಟ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಮಣಿಪಾಲ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಐಡಾ ಡಿ'ಸೋಜಾ ಮಾತನಾಡಿ, ಸಮುದಾಯವು ತನ್ನದೇ ಆದ ಅನನ್ಯತೆ, ಸಂಸ್ಕೃತಿ ಮತ್ತು ವಿಶಿಷ್ಟ ಭಾಷೆ ಹೊಂದಿದ್ದು ಸಾಮುದಾಯಿಕ ಗುರಿ ಸಾಧಿಸಲು ಸಂಘಟಿತರಾಗುವುದು ಮುಖ್ಯ ಎಂದರು.
ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಡಾ.ಸಬಿತಾ ಗುಂಡ್ಮಿ ಮತ್ತು ಸಮಗ್ರ ಗ್ರಾಮೀಣ ಆಶ್ರಮದ ಸಂಯೋಜಕ ಅಶೋಕ ಶೆಟ್ಟಿ ಇದ್ದರು.
ಪದ್ಮ ಎಸ್. ವೇಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಪ್ರಿಯಾ ಎಸ್. ಕಿನ್ನಿಗೋಳಿ ನಿರೂಪಿಸಿದರು.
ಸುಮಾರು 50 ಮಂದಿ ಭಾಗವಹಿಸಿದ್ದರು.