-->
ಮಲ್ಪೆ ಪ್ರಕರಣ ಸೌಹಾರ್ದಯುತವಾಗಿ ಬಗೆಹರಿಸಿ

ಮಲ್ಪೆ ಪ್ರಕರಣ ಸೌಹಾರ್ದಯುತವಾಗಿ ಬಗೆಹರಿಸಿ

ಲೋಕಬಂಧು ನ್ಯೂಸ್
ಉಡುಪಿ: ಮಲ್ಪೆ ಬಂದರು ಪ್ರದೇಶದಲ್ಲಿ ಮಾ.18ರಂದು ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಹಲ್ಲೆ ಘಟನೆ ಉದ್ದೇಶಪೂರ್ವಕವಾಗಿ ನಡೆದುದಲ್ಲ. ಮಲ್ಪೆ ಮೀನುಗಾರ ಸಂಘದ ಮಧ್ಯಸ್ಥಿಕೆಯಲ್ಲಿ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಮಾಜಿ ಶಾಸಕ ಕೆ. ರಘುಪತಿ ಭಟ್ ಒತ್ತಾಯಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಅಮಾಯಕರ ಮೇಲೆ ದಲಿತ ದೌರ್ಜನ್ಯ (ಅಟ್ರಾಸಿಟಿ) ಮೊಕದ್ದಮೆ ದಾಖಲಿಸಿ ಬಂಧಿಸಿರುವುದು ಖಂಡನೀಯ ಎಂದವರು ಹೇಳಿದ್ದಾರೆ.


ಆಕ್ರೋಶ ಸಹಜ
ಬೆಳಗ್ಗಿನ ಜಾವ 3 ಗಂಟೆಗೆ ಎದ್ದು ಮೀನುಗಾರರು ಸಮುದ್ರದಲ್ಲಿ ಜೀವದ ಹಂಗು ತೊರೆದು ಮೀನುಗಾರಿಕೆ ನಡೆಸಿ ತಂದ ಮೀನು ಕಳ್ಳತನವಾದಾಗ ಈ ತರಹದ ಆಕ್ರೋಶದ ಪ್ರತಿಕ್ರಿಯೆ ಸಾಮಾನ್ಯ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಅಮಾಯಕರ ಮೇಲೆ ಮೊಕದ್ದಮೆ ದಾಖಲಿಸದೇ ಮಲ್ಪೆ ಮೀನುಗಾರರ ಸಂಘದ ಮಧ್ಯಸ್ಥಿಕೆಯಲ್ಲಿ ಎರಡೂ ಕಡೆಯವರನ್ನು ಕರೆಸಿ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿ ಮೀನುಗಾರರಿಗೆ ರಕ್ಷಣೆ ನೀಡಬೇಕು ಎಂದು ಭಟ್ ಒತ್ತಾಯಿಸಿದ್ದಾರೆ.


ಘಟನೆಯ ವೈಭವೀಕರಣ ಸಲ್ಲದು
ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹೊಡೆದಿರುವುದು ತಪ್ಪು. ಅದನ್ನು ನಾನು ಖಂಡಿಸುತ್ತೇನೆ. ಆದರೆ, ಅದನ್ನು ವೈಭವೀಕರಿಸುವುದು ಸರಿಯಲ್ಲ.


ಮಲ್ಪೆ ಬಂದರಿನಲ್ಲಿ ನಿರಂತರವಾಗಿ ಮೀನು ಕಳ್ಳತನ ನಡೆಯುತ್ತಿದ್ದರಿಂದ ಕಳ್ಳ ಕೈಗೆ ಸಿಕ್ಕಾಗ ಸಾರ್ವಜನಿಕರು ಆಕ್ರೋಶ ಭರಿತರಾಗಿ ಈ ರೀತಿ ಪ್ರತಿಕ್ರಿಯಿಸಿರಬಹುದು. ಯಾವುದೇ ಊರಿನಲ್ಲಿಯೂ ಕಳ್ಳರು ಕೈಗೆ ಸಿಕ್ಕಾಗ ಯಾರೂ ಗೌರವದಿಂದ ಕಾಣುವುದಿಲ್ಲ.


ರಾಜೀ ಆಗಿತ್ತು
ಈ ಪ್ರಕರಣ ನಡೆದ ಬಳಿಕ ಎರಡೂ ಕಡೆಯವರನ್ನು ಠಾಣೆಗೆ ಕರೆಸಿ ಮೀನುಗಾರರ ಮುಖಂಡರ ಸಮಕ್ಷಮದಲ್ಲಿ ರಾಜೀ ಮಾಡಲಾಗಿತ್ತು. ಅಲ್ಲಿ ಎರಡೂ ಕಡೆಯವರ ತಮ್ಮ ತಪ್ಪು ಒಪ್ಪಿಕೊಂಡಿದ್ದರು.‌


ಮಲ್ಪೆ ಠಾಣಾಧಿಕಾರಿ ಎರಡೂ ಕಡೆಯವರಿಂದ ತಪ್ಪೊಪ್ಪಿಗೆ ಹಿಂಬರಹ ಬರೆಸಿಕೊಂಡು ಸೌಹಾರ್ದಯುತವಾಗಿ ಪ್ರಕರಣ ಇತ್ಯರ್ಥಗೊಳಿಸಿದ್ದರು.


ಆದರೆ, ಘಟನೆಯ ವಿಡಿಯೋ ಚಿತ್ರೀಕರಣವನ್ನು ವೈಭವೀಕರಿಸಿದ ನಂತರ ಪೊಲೀಸ್ ಇಲಾಖೆ  ಅಮಾಯಕ ಮೀನುಗಾರರ ಮೇಲೆ ಅಟ್ರಾಸಿಟಿ ಕೇಸು ದಾಖಲಿಸಿ ಬಂಧಿಸಿರುವುದು ಸರಿಯಲ್ಲ.


ಪ್ರಕರಣದಲ್ಲಿ ಭಾಗಿಯಾಗದವರನ್ನು ಬಂಧಿಸಿರುವುದರಿಂದ ಮೀನುಗಾರರು ಅಭದ್ರತೆಗೆ ಒಳಗಾಗಿದ್ದಾರೆ. ಈ ಘಟನೆ ಉದ್ದೇಶಪೂರ್ವಕವಾಗಿರದೇ ಕ್ಷಣಿಕ ಸಿಟ್ಟಿನಿಂದ ನಡೆದ ಘಟನೆಯಾಗಿದೆ.


ಕಳೆದ ಅನೇಕ ವರ್ಷಗಳಿಂದ ಮತ್ಸ್ಯ ಕ್ಷಾಮದಿಂದ ಮೀನುಗಾರಿಕೆ ಕುಂಠಿತಗೊಂಡು ಮೀನುಗಾರರು ನಷ್ಟ ಅನುಭವಿಸುತ್ತಿದ್ದಾರೆ. ಈ ನಡುವೆ ಮಲ್ಪೆ ಬಂದರಿನಲ್ಲಿ ನಿರಂತರವಾಗಿ ಮೀನು ಕಳ್ಳತನ ಹಾಗೂ ಮೀನುಗಾರಿಕೆ ಸಲಕರಣೆಗಳಾದ ಬೋಟಿನ ಫ್ಯಾನ್, ಬ್ಯಾಟರಿ, ಜಿಪಿಎಸ್, ವೈಯರ್ಲೆಸ್, ಫಿಶ್ ಫೈಂಡರ್, ಬಲೆ ಇತ್ಯಾದಿ ಸಾಮಗ್ರಿಗಳು ಕಳ್ಳತನವಾಗುತ್ತಿದ್ದರಿಂದ ಅಲ್ಲಿನ ಜನ ಆಕ್ರೋಶಭರಿತರಾಗಿದ್ದರು.


ಕಳ್ಳತನಕ್ಕೆ ಕಡಿವಾಣ ಹಾಕಿ
ಮಲ್ಪೆ ಬಂದರಿನಲ್ಲಿ ನಡೆಯುತ್ತಿರುವ ಕಳ್ಳತನಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಈ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿ ಮೀನುಗಾರರಿಗೆ ರಕ್ಷಣೆ ನೀಡಬೇಕು ಎಂದು ಸರಕಾರ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಮಾಜಿ ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.

Ads on article

Advertise in articles 1

advertising articles 2

Advertise under the article