
ಸರ್ವಜ್ಞ ಪೀಠ ಸ್ವರ್ಣಾಚ್ಛಾದನೆ ಯೋಜನೆಗೆ ಚಾಲನೆ
Friday, March 21, 2025
ಲೋಕಬಂಧು ನ್ಯೂಸ್
ಉಡುಪಿ: ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಅಂಗವಾಗಿ ಸುಮಾರು 1.25 ಕೋ.ರೂ. ವೆಚ್ಚದಲ್ಲಿ ಸರ್ವಜ್ಞ ಪೀಠಕ್ಕೆ ಚಿನ್ನ ಹೊದಿಸುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಉಡುಪಿ ಶ್ರೀಕೃಷ್ಣನನ್ನು ಪ್ರತಿಷ್ಠಾಪನೆಗೈದ ಲೋಕಗುರು ಆಚಾರ್ಯ ಮಧ್ವರ ಸನ್ನಿಧಾನವಿರುವ ಸರ್ವಜ್ಞ ಪೀಠಕ್ಕೆ ಸುವರ್ಣ ಹೊದಿಸಿ, ಏಪ್ರಿಲ್ 14ರಂದು ಸೌರಯುಗಾದಿಯಂದು ಸಮರ್ಪಿಸಲು ಸಂಕಲ್ಪಿಸಲಾಗಿದ್ದು, ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಂದಿಗೆ ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ಪ್ರಾರ್ಥನೆ ಸಲ್ಲಿಸಿ, ಚಾಲನೆ ನೀಡಿದರು.
ಶ್ರೀಮಠದ ಶಿಷ್ಯ, ಪ್ರತಿಷ್ಠಿತ ಕಾಳಿದಾಸ ಸಂಮಾನ್ ಪುರಸ್ಕೃತ ಕಲಾವಿದ ಗಂಜೀಫಾ ರಘುಪತಿ ಭಟ್ ಮತ್ತವರ ತಂಡ ಸೂಕ್ಷ್ಮ ಕುಸುರಿ ಕಾರ್ಯ ಕೈಗೆತ್ತಿಕೊಂಡಿದೆ.
ಈ ಅಪೂರ್ವ ಕಾರ್ಯದಲ್ಲಿ ಭಕ್ತಾದಿಗಳೂ ಪಾಲ್ಗೊಂಡು ಅಪೂರ್ವ ಅವಕಾಶದಲ್ಲಿ ಪುಣ್ಯಭಾಗಿಗಳಾಗಬಹುದು ಎಂದು ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ವಿದೇಶ ವ್ಯವಹಾರಗಳ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.