
ಕಾಪುಗೆ ಶೃಂಗೇರಿ ಶ್ರೀ ಭೇಟಿ
Wednesday, March 5, 2025
ಲೋಕಬಂಧು ನ್ಯೂಸ್
ಕಾಪು: ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಬುಧವಾರ ಇಲ್ಲಿನ ಶ್ರೀ ಹೊಸಮಾರಿಗುಡಿ ದೇವಳಕ್ಕೆ ಭೇಟಿ ನೀಡಿದರು.ಗೌರವಾದರಗಳೊಂದಿಗೆ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು.
ಶ್ರೀ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ದಂಪತಿ ಶ್ರೀಗಳಿಗೆ ಧೂಳಿಪಾದಪೂಜೆ ಸಮರ್ಪಿಸಿದರು.
ಕ್ಷೇತ್ರದ ಸಮಗ್ರ ಜೀರ್ಣೋದ್ಧಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು, ನೆರೆದ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಮಾಜಿ ಶಾಸಕ ರಘುಪತಿ ಭಟ್, ಯೋಗೀಶ ಶೆಟ್ಟಿ ಮೊದಲಾದವರಿದ್ದರು.
ಕ್ಷೇತ್ರದ ಪ್ರಧಾನ ತಂತ್ರಿಗಳಾದ ಕುಮಾರಗುರು ತಂತ್ರಿ ಪ್ರಾಸ್ತಾವನೆಗೈದರು. ದಾಮೋದರ ಶರ್ಮ ಬಾರ್ಕೂರು ನಿರೂಪಿಸಿದರು.