-->
ಒತ್ತಡ ನಿರ್ವಹಣೆಗೆ ಕ್ರೀಡೆ ಸಹಕಾರಿ

ಒತ್ತಡ ನಿರ್ವಹಣೆಗೆ ಕ್ರೀಡೆ ಸಹಕಾರಿ

ಲೋಕಬಂಧು ನ್ಯೂಸ್
ಉಡುಪಿ: ವಕೀಲರು ಹಾಗೂ ನ್ಯಾಯಾಧೀಶರು ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಕಾನೂನು ವ್ಯವಸ್ಥೆಯಲ್ಲಿ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಾಧ್ಯಕ್ಷ ಹಾಗೂ ಹೈಕೋರ್ಟ್ ನ್ಯಾಯಾಧೀಶ ನ್ಯಾ| ಕಾಮೇಶ್ವರ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.ಉಡುಪಿ ವಕೀಲರ ಸಂಘ ಮತ್ತು ನ್ಯಾಯಾಲಯದ 125ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಎಂ.ಜಿ.ಎಮ್ ಮೈದಾನದಲ್ಲಿ ನಡೆಯುತ್ತಿರುವ ಎರಡು ದಿನದ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟವನ್ನು ಮಾರ್ಚ್ 1ರಂದು ಸಂಜೆ ಉದ್ಘಾಟಿಸಿ ಮಾತನಾಡಿದರು.


ವಕೀಲರು ಪ್ರಕರಣಗಳನ್ನು ಜಯಿಸಲು ಸಾಕಷ್ಟು ಅಧ್ಯಯನ, ಚಿಂತನೆ ನಡೆಸಬೇಕಾಗುತ್ತದೆ. ಅಂತೆಯೇ ನ್ಯಾಯಾಧೀಶರು ಉತ್ತಮ ತೀರ್ಪು ನೀಡಲು ಅಧ್ಯಯನ ನಡೆಸಬೇಕಾಗುತ್ತದೆ. ಅದರಿಂದ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ. ಅದನ್ನು ನಿರ್ವಹಿಸಲು ಕ್ರೀಡೆ ಸುಲಭ ಮಾರ್ಗ.


ವಕೀಲರ ಸಂಘ ಕ್ರೀಡಾ ಪಂದ್ಯಾಟಗಳನ್ನು ನಿರಂತರವಾಗಿ ನಡೆಸುತ್ತಿರಬೇಕು. ಅದರಿಂದ ರಾಜ್ಯ, ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ವಕೀಲರ ನಡುವೆ ಪರಸ್ಪರ ಸಮನ್ವಯ ಹಾಗೂ ಸೌಹಾರ್ದ ಬೆಳೆಯುತ್ತದೆ ಎಂದರು.


ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾ| ರಾಜೇಶ್ ರೈ ಕೆ. ಮಾತನಾಡಿ, ಕ್ರೀಡೆ ಮತ್ತು ನ್ಯಾಯಾಂಗ ವ್ಯವಸ್ಥೆ ಒಂದಕ್ಕೊಂದು ನೇರ ಸಂಬಂಧ ಹೊಂದಿದೆ. ವಕೀಲರು ಕ್ರೀಡೆಯಲ್ಲಿ ತೊಡಗಿಸಿಕೊಂಡಲ್ಲಿ ಅವರಲ್ಲಿನ ಕ್ರಿಯಾಶೀಲತೆ ಹೆಚ್ಚಾಗುತ್ತದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ನ್ಯಾ| ಇ.ಎಸ್.ಇಂದಿರೇಶ್ ಮಾತನಾಡಿ, ಪ್ರತಿನಿತ್ಯ ಕನಿಷ್ಟ ವ್ಯಾಯಾಮ ಮಾಡಬೇಕು. ಅದು ಆರೋಗ್ಯಕ್ಕೂ ಉತ್ತಮ ಮತ್ತು ವಕೀಲ ವೃತ್ತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಹಕಾರಿ ಎಂದರು.


ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಮ್.ಎಲ್.ರಘುನಾಥ್, ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್, ವಕೀಲರ ಸಂಘದ ಉಪಾಧ್ಯಕ್ಷ ಮತ್ತು ಕ್ರೀಡಾಕೂಟದ ಸಂಚಾಲಕ ಮಿತ್ರಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.


ಹಿರಿಯ ವಕಿಲ ವಿಜಯ ಕುಮಾರ್ ಶೆಟ್ಟಿ ನಾಡಗೀತೆ ಹಾಡಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ಹಿರಿಯ ವಕೀಲೆ ಮೇರಿ ಎ.ಆರ್.ಶ್ರೇಷ್ಠಾ ನಿರೂಪಿಸಿದರು.ಚೆಂಡೆ, ಕೊಂಬು ವಾದ್ಯಗಳ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು. ದೀಪ ಪ್ರಜ್ವಲಿಸಿ, ಬಲೂನ್'ಗಳನ್ನು ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.


ಹೊನಲು ಬೆಳಕಿನ ಕ್ರೀಡಾಕೂಟದಲ್ಲಿ 39 ಕ್ರಿಕೆಟ್, 16 ವಾಲಿಬಾಲ್, 10 ತ್ರೋ ಬಾಲ್, 40 ಶಟಲ್ ಬ್ಯಾಡ್ಮಿಂಟನ್ ತಂಡಗಳು ಭಾಗವಹಿಸಿವೆ.


ವಕೀಲರ ಸಂಘದ ವತಿಯಿಂದ ನ್ಯಾ| ಕಾಮೇಶ್ವರ ರಾವ್ ಅವರನ್ನು ಸನ್ಮಾನಿಸಲಾಯಿತು.


ಉಡುಪಿ ನ್ಯಾಯಾಧೀಶರ ವತಿಯಿಂದ ಅತಿಥಿಗಳನ್ನು ಗೌರವಿಸಲಾಯಿತು.

Ads on article

Advertise in articles 1

advertising articles 2

Advertise under the article