ಹಾದಿ ತಪ್ಪುವ ಯುವ ಜನತೆಗೆ ರಂಗ ಚಟುವಟಿಕೆ ತಡೆ
Sunday, March 2, 2025
ಲೋಕಬಂಧು ನ್ಯೂಸ್
ಉಡುಪಿ: ಯುವ ಜನರು ದಾರಿ ತಪ್ಪುವುದನ್ನು, ದುಶ್ಚಟಕ್ಕೆ ಬಲಿಯಾಗುವುದನ್ನು ತಡೆಯುವ ಕೆಲಸ ರಂಗ ಚಟುವಟಿಕೆ, ಸಮಾಜಮುಖಿ ಕಾರ್ಯಗಳಿಂದ ಸಾಧ್ಯ ಎಂದು ತುಳುಕೂಟ ಉಡುಪಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯ ವ್ಯಕ್ತಪಡಿಸಿದರು.ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗ ಮಂದಿರದಲ್ಲಿ ನಡೆದ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 13ನೇ ವರ್ಷದ ರಂಗಹಬ್ಬದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾರ್ಚ್ 1ರಂದು ಮಾತನಾಡಿದರು.
ಸಣ್ಣ ಪ್ರಾಯದಲ್ಲಿಯೇ ಸಂಗೀತ, ನೃತ್ಯ, ನಾಟಕಗಳಲ್ಲಿ ತೊಡಗಿಕೊಳ್ಳುವವರು ದಾರಿ ತಪ್ಪುವುದಿಲ್ಲ, ದುರಭ್ಯಾಸಗಳಿಗೆ ಒಳಗಾಗುವುದಿಲ್ಲ. ರಂಗ ಸಂಸ್ಥೆಗಳು ಕಲೆಯನ್ನು ಕಲಿಸುವುದರ ಜೊತೆಗೆ ಜೀವನ ಪಾಠವನ್ನೂ ಹೇಳಿಕೊಡುತ್ತವೆ ಎಂದರು.
ಯಾವುದೇ ಕಲಾವಿದ ಸನ್ಮಾನಕ್ಕಾಗಿ ಕಲಾಸೇವೆ ಮಾಡುವುದಿಲ್ಲ. ಆದರೆ, ಅವರ ಸಾಧನೆಯನ್ನು ಗುರುತಿಸುವುದು ಸಮಾಜದ ಕರ್ತವ್ಯ. ಅಂಥ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸುಮನಸಾ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ಶ್ಲಾಘಿಸಿದರು.
ಲಯನ್ಸ್ ಉಪ ಗವರ್ನರ್ ಸಪ್ನಾ ಸುರೇಶ್ ಮಾತನಾಡಿ, ಸಂಘಸಂಸ್ಥೆಗಳನ್ನು ಹುಟ್ಟುಹಾಕುವುದರಿಂದ ದೊಡ್ಡ ಜವಾಬ್ದಾರಿ ಬೆಳೆಯಲಿದೆ ಎಂದರು.
ಯಕ್ಷಗುರು ಯು. ದುಗ್ಗಪ್ಪ ಸ್ಮರಣಾರ್ಥ ಯಕ್ಷಸುಮ ಪ್ರಶಸ್ತಿಯನ್ನು ಗೋಪು ಕೆ. ಅವರಿಗೆ ಪ್ರದಾನ ಮಾಡಲಾಯಿತು.
ಉದ್ಯಮಿಗಳಾದ ಮಲ್ಪೆ ಹರಿಯಪ್ಪ ಕೋಟ್ಯಾನ್, ಆನಂದ್ ಪಿ. ಸುವರ್ಣ ಮಲ್ಪೆ, ಹರೀಶ್ ಶ್ರೀಯಾನ್, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ದೇವದಾಸ್ ಆರ್. ಸುವರ್ಣ ಮತ್ತು ಪ್ರಭಾಕರ ಪೂಜಾರಿ, ಸುಮನಸಾ ಕೊಡವೂರು ಸಂಸ್ಥೆ ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು.
ಸಂಸ್ಥೆ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಅಕ್ಷತ್ ಅಮೀನ್ ವಂದಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಉಡುಪಿಯ ಪುನಹ ಥಿಯೇಟರ್ ಕಲಾವಿದರಿಂದ ಯೋಗಿ ಮತ್ತು ಭೋಗಿ ನಾಟಕ ಪ್ರದರ್ಶನಗೊಂಡಿತು.