
ಅಂತರ ಜಿಲ್ಲಾ ಶಾಲಾ ಕಾಲೇಜು ಕಳ್ಳತನದ ಆರೋಪಿ ಸೆರೆ
Tuesday, March 25, 2025
ಲೋಕಬಂಧು ನ್ಯೂಸ್
ಕಾರ್ಕಳ: ಕಳೆದ ಫೆ. 21 ಮತ್ತು 22ರ ನಡುವೆ ಬೆಳ್ಮಣ್ಣು ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಕಚೇರಿಯ ಬಾಗಿಲು ಒಡೆದು ಒಳಪ್ರವೇಶಿಸಿ ನಗದು ಹಣ ಅಂದಾಜು 1.5 ಲಕ್ಷ ಮತ್ತು 3 ಡಿವಿಆರ್ ಗಳನ್ನು ಕಳವು ಮಾಡಿದ್ದಲ್ಲದೆ ಶಾಲೆಯ ಸಿಸಿ ಟಿವಿ ಹಾಳು ಮಾಡಿದ್ದ ಅಂತರ ಜಿಲ್ಲಾ ಕಾಲೇಜು ಕಳ್ಳತನದ ಆರೋಪಿ ಬೈಂದೂರು ಯೋಜನಾ ನಗರದ ಅರ್ಷಿತ್ ಅವಿನಾಶ್ ದೋಡ್ರೆ (24) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆತ ಮಾ. 6ರಂದು ನಂದಳಿಕೆ ಗ್ರಾಮದ ಸ.ಹಿ.ಪ್ರಾ. ಶಾಲೆಯ ಬೀಗ ಮುರಿದು ಒಳಪ್ರವೇಶಿಸಿ ಕಪಾಟಿನ ಬಾಗಿಲು ತೆಗೆದು, ರಿಜಿಸ್ಟರ್ ಗಳನ್ನು ಚೆಲ್ಲಾಪಿಲ್ಲಿಯಾಗಿಸಿದ್ದ.
ಮಾ. 4ರಂದು ಹಿರ್ಗಾನ ಗ್ರಾಮದ ಸಂತ ಮರಿಯಾ ಗೊರಟ್ಟಿ ಆಂಗ್ಲ ಮಾಧ್ಯಮ ಶಾಲೆ ಪ್ರವೇಶಿಸಿ 60 ಸಾವಿರ ರೂ. ನಗದು ಮತ್ತು 5 ಸಾವಿರ ರೂ. ಮೌಲ್ಯದ ಸಿಸಿ ಕ್ಯಾಮರಾ ಡಿವಿಆರ್ ಕಳವು ಮಾಡಿದ್ದ.
ಈ ಎಲ್ಲಾ ಪ್ರಕರಣಗಳ ತನಿಖೆ ಕೈಗೊಂಡಿದ್ದ ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ನೇತೃತ್ವದ ಕಾರ್ಕಳ ನಗರ ಮತ್ತು ಗ್ರಾಮಾಂತರ ಎಸ್ಐ ಮತ್ತವರ ತಂಡ ನಿಟ್ಟೆ ಸಂತ ಲಾರೆನ್ಸ್ ಪ್ರೌಢಶಾಲೆ ಸಮೀಪ ಅನುಮಾನಾಸ್ಪದವಾಗಿ ಬಿಳಿ ಬಣ್ಣದ ಕಾರಿನಲ್ಲಿ ಕಂಡು ಬಂದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ತಪ್ಪು ಒಪ್ಪಿಕೊಂಡಿದ್ದು, ಆತನನ್ನು ವಶಪಡಿಸಿಕೊಳ್ಳಲಾಯಿತು.
ಪ್ರಕರಣಗಳಿಗೆ ಸಂಬಂದಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಆತನಿಂದ ಕೃತ್ಯಕ್ಕೆ ಬಳಸಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಕಾರು, 20 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್, ನಗದು 84,500 ರು. ಮತ್ತು ಇತರ ಸ್ವತ್ತುಗಳನನ್ನು ವಶಪಡಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.