-->
ಅನುಭವ ಮಂಟಪದ ಮೂಲಕ ಸಮಾನತೆ ತೋರಿದ ಬಸವಣ್ಣ

ಅನುಭವ ಮಂಟಪದ ಮೂಲಕ ಸಮಾನತೆ ತೋರಿದ ಬಸವಣ್ಣ

ಲೋಕಬಂಧು ನ್ಯೂಸ್
ಉಡುಪಿ: ಬಸವಣ್ಣನ ಸಿದ್ದಾಂತಗಳು ಸಮಾಜದಲ್ಲಿ ಅನೇಕ ಬದಲಾವಣೆ ಮಾಡಿದ್ದು, ಅನುಭವ ಮಂಟಪದ ಮೂಲಕ ಸಮಾನತೆಯನ್ನು ಸಮಾಜಕ್ಕೆ ತೋರಿಸಿಕೊಟ್ಟ ಅವರ ತತ್ವ, ಆದರ್ಶಗಳನ್ನು ಎಲ್ಲೆಡೆ ಸಾರುವುದರೊಂದಿಗೆ ಅವುಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಂಡು ಜಯಂತಿ ಆಚರಣೆಯ ಮೆರುಗು ಹೆಚ್ಚಿಸಬೇಕು ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದರು.
ಬುಧವಾರ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಸವ ಸಮಿತಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಜಯಂತಿ ಉದ್ಘಾಟಿಸಿ, ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ಮಾತನಾಡಿದರು.


ಮಾನವೀಯತೆಯ ಕಲ್ಯಾಣಕ್ಕಾಗಿ ತಮ್ಮ ಇಡೀ ಜೀವನವನ್ನು ಮೂಡಿಪಾಗಿಟ್ಟ ಬಸವಣ್ಣ ಬಡವರು, ದಲಿತರು, ನೊಂದವರು, ಕಾಯಕ ಜೀವಿಗಳ ವಿಶ್ವ ಗುರುವಾಗಿದ್ದಾರೆ. ವಚನ ಸಾಹಿತ್ಯದ ತತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಇನ್ನೂ ಹೆಚ್ಚಿನ ರೀತಿಯಲ್ಲಿ ಆಗಬೇಕಿದೆ ಎಂದರು.


ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬಸವಣ್ಣನ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು ಅವರ ಬದುಕು, ಬರಹ ಹಾಗೂ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಪಾಲಿಸಬೇಕು ಎಂದರು.


ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, 12ನೇ ಶತಮಾನದಲ್ಲಿ ಇಡೀ ಜಗತ್ತಿಗೆ ಮಾದರಿಯಾಗುವ ಚಿಂತನೆ ಹಾಗೂ ವಚನಗಳನ್ನು ನೀಡಿದ ಮಹಾನಾಯಕ ಬಸವಣ್ಣ. ಅನುಭವ ಮಂಟಪದಲ್ಲಿ ಜಾತಿ ಸಂಕೋಲೆಯಿಲ್ಲದೆ, ಮೇಲು ಕೀಳು ಎಂಬ ಭಾವನೆಗಳಿಲ್ಲದೆ ಎಲ್ಲರೂ ಸಮಾನರು ಎನ್ನುವ ಸಂದೇಶ ಸಾರಿದರು ಎಂದರು.


ಉಡುಪಿ ಬಸವ ಸಮಿತಿ ಗೌರವಾಧ್ಯಕ್ಷ ಡಾ.ಜಿ.ಎಸ್. ಚಂದ್ರಶೇಖರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ನಿರಂಜನ್ ಯು.ಸಿ. ಮಾತನಾಡಿದರು.


ಈ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.


ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಬಸವ ಸಮಿತಿ ಅಧ್ಯಕ್ಷ ಗಂಗಾಧರ್, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ  ಪ್ರಕಾಶ್ ಸಜ್ಜನ್ ಮೊದಲಾದವರಿದ್ದರು.


ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಪ್ರದೀಪ್ ಹಾವಂಜೆ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಉಡುಪಿ ಬಸವ ಸಮಿತಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ವತಿಯಿಂದ ನಗರದ ಬೋರ್ಡ್ ಹೈಸ್ಕೂಲ್ ಆವರಣದಿಂದ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದ ವರೆಗೆ ಸಾಗಿದ ವಿಶ್ವಗುರು ಬಸವಣ್ಣ ಪ್ರತಿಮೆ ಹೊತ್ತ ಜಾಥಾಕ್ಕೆ  ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಚಾಲನೆ ನೀಡಿದರು.

Ads on article

Advertise in articles 1

advertising articles 2

Advertise under the article