
ಬೆಲೆ ಏರಿಕೆ ಮೂಲಕ ಮಹಿಳೆಯರಿಗೆ ಮೋಸ
Friday, April 11, 2025
ಲೋಕಬಂಧು ನ್ಯೂಸ್
ಉಡುಪಿ: ಕೇಂದ್ರ ಸರ್ಕಾರ ಅಡುಗೆ ಅನಿಲವೂ ಸೇರಿದಂತೆ ಎಲ್ಲಾ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಿಸುವ ಮೂಲಕ ಮಹಿಳೆಯರಿಗೆ ಮೋಸ ಮಾಡಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಕಿಡಿ ಕಾರಿದರು.
ಕೇಂದ್ರ ಬಿಜೆಪಿ ಸರಕಾರದ ಬೆಲೆ ಏರಿಕೆ ವಿರುದ್ಧ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ಬ್ರಹ್ಮಗಿರಿ ವೃತ್ತದಲ್ಲಿ ನಡೆದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಯುಪಿಎ ಸರಕಾರ ಇದ್ದಾಗ 400 ರೂ. ಇದ್ದ ಗ್ಯಾಸ್ ಬೆಲೆ ಈಗ 1,000 ರೂ. ದಾಟಿದೆ. ರಾತ್ರೋರಾತ್ರಿ ಅಡುಗೆ ಅನಿಲ ಬೆಲೆಯನ್ನು 50 ರೂ. ಏರಿಕೆ ಮಾಡಿದ್ದಾರೆ. ಅದರೊಂದಿಗೆ ಪೆಟ್ರೋಲ್, ಡಿಸೇಲ್ ಬೆಲೆಯನ್ನು 2 ರೂ ಏರಿಸಲಾಗಿದೆ. ಮಹಿಳೆಯರು, ಮಧ್ಯಮ ವರ್ಗದ ಜನ ಹೇಗೆ ಜೀವನ ನಡೆಸಬೇಕು ಎಂಬ ಚಿಂತೆಯಲ್ಲಿದ್ದಾರೆ.
ರಾಜ್ಯದ ಬಿಜೆಪಿ ನಾಯಕರು ಜನಾಕ್ರೋಶ ಯಾತ್ರೆ ಮಾಡುತ್ತಿದ್ದು, ಅದು ಕೇಂದ್ರದ ಬಿಜೆಪಿ ನಾಯಕರ ವಿರುದ್ದವೇ ಮಾಡುತ್ತಿರಬೇಕು. ಅಚ್ಚೇ ದಿನ್ ಬರುವುದಾಗಿ ಹೇಳಿ ಜನರಿಗೆ ಟೋಪಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಗುಡುಗಿದರು.
ಕಾಂಗ್ರೆಸ್, ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ಆರಂಭಿಸಿದೆ. ಬಿಜೆಪಿಯವರು ಜಾತಿ ಧರ್ಮದ ಹೆಸರಿನಲ್ಲಿ ಜನರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಬೆಲೆ ಏರಿಕೆ ಹಿಂತೆಗೆದುಕೊಳ್ಳುವ ತನಕ ನಮ್ಮ ಪ್ರತಿಭಟನೆ ನಡೆಯಲಿದೆ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ವಿನಯ್ ಕುಮಾರ್ ಸೊರಕೆ, ಗೀತಾ ವಾಗ್ಳೆ, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಕೃಷ್ಣ ಶೆಟ್ಟಿ ಬಜಗೋಳಿ, ವೆರೋನಿಕಾ ಕರ್ನೇಲಿಯೋ, ರೋಶನಿ ಒಲಿವರ್, ಅಮೃತ್ ಶೆಣೈ, ಎಮ್.ಎ. ಗಫೂರ್, ಅಶೋಕ್ ಕುಮಾರ್ ಕೊಡವೂರು, ಶರ್ಫುದ್ದೀನ್ ಶೇಖ್, ಕೀರ್ತಿ ಶೆಟ್ಟಿ, ನವೀನ್ ಚಂದ್ರ ಸುವರ್ಣ, ಪ್ರಭಾಕರ ಆಚಾರ್ಯ, ಶಿವಾಜಿ ಸುವರ್ಣ ಮೊದಲಾದವರಿದ್ದರು.