ಹಿಂದೂಸ್ಥಾನಿ ಸಂಗೀತ ಶ್ರೀಮಂತ ಕಲಾಪ್ರಕಾರ
Monday, April 14, 2025
ಲೋಕಬಂಧು ನ್ಯೂಸ್
ಉಡುಪಿ: ಹಲವು ಘರಾನಾಗಳು, ಪ್ರಕಾರ, ಪ್ರಯೋಗಗಳನ್ನೊಳಗೊಂಡ ಹಿಂದೂಸ್ಥಾನಿ ಸಂಗೀತ ಶ್ರೀಮಂತ ಹಾಗೂ ವೈವಿಧ್ಯಪೂರ್ಣ ಕಲಾಪ್ರಕಾರವಾಗಿದೆ ಎಂದು ವಿದುಷಿ ಶ್ರೀಮತಿದೇವಿ ಅಭಿಪ್ರಾಯ ವ್ಯಕ್ತಪಡಿಸಿದರು.ಮಣಿಪಾಲ ಮಾಹೆ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ನಡೆದ ಹಿಂದುಸ್ಥಾನಿ ಸಂಗೀತ ರಸ ಗ್ರಹಣ ಶಿಬಿರದಲ್ಲಿ ಮಾತನಾಡಿದರು.
ಗ್ವಾಲಿಯರ್, ಜೈಪುರ, ಆಗ್ರಾ, ಕಿರಾಣಾ ಮುಂತಾದ ಘರಾನಾಗಳು, ಖಮಾಲ್, ಠುಮ್ರಿ, ಠಪ್ಜಾ ಇತ್ಯಾದಿ ಪ್ರಕಾರಗಳು, ಅಲ್ಲಾದಿಯಾ ಖಾನ್, ಭೀಮಸೇನ್ ಜೋಶಿ, ಮಲ್ಲಿಕಾರ್ಜುನ್ ಮನ್ಸೂರ್, ಕುಮಾರ ಗಂಧರ್ವ, ಕಿಶೋರಿ ಅಮೋನ್ಕರ್, ಪರ್ವಿನ್ ಸುಲ್ತಾನಾ ಅಂಥವರ ಪ್ರಯೋಗಗಳೆಲ್ಲ ಸೇರಿ ಇದು ಶ್ರೀಮಂತ ಮತ್ತು ವೈವಿಧ್ಯಪೂರ್ಣವಾಗಿದೆ ಎಂದರು.
ತಮ್ಮ ಎರಡು ದಿನಗಳ ಶಿಬಿರದಲ್ಲಿ ಹಿಂದೂಸ್ಥಾನಿ ಸಂಗೀತದ ಸ್ವರ, ಲಯ, ರಾಗ ಇತ್ಯಾದಿ ಸೂಕ್ಷ್ಮಗಳನ್ನು ವಿವರಿಸಿದ ಅವರು, ಪ್ರಾತ್ಯಕ್ಷಿಕೆ ಮೂಲಕ ಘರಾನಾ ಪ್ರಕಾರ ಪ್ರಯೋಗಗಳ ವ್ಯತ್ಯಾಸಗಳನ್ನು ಪ್ರಸ್ತುತಪಡಿಸಿದರು.
ಹಿಂದೂಸ್ಥಾನಿ ಸಂಗೀತದ ಬೆಳವಣಿಗೆಯ ಹಿಂದೆ ಹಲವು ಪ್ರತಿಭೆಗಳು ಕೆಲಸ ಮಾಡಿದ್ದನ್ನು ವಿವರಿಸಿ, ಹಿಂದೂಸ್ಥಾನಿ ಸಂಗೀತ ಮತ ಧರ್ಮಗಳ ಚೌಕಟ್ಟನ್ನು ಮೀರಿ ಬೆಳೆದಿದೆ ಎಂದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ , ಹಿಂದೂಸ್ಥಾನಿ ಸಂಗೀತ ಭಾರತೀಯ ಸಂಸ್ಕೃತಿಯ ಅತ್ಯುತ್ತಮ ಪ್ರತಿನಿಧಿಯಾಗಿದೆ ಎಂದರು.
ಡಾ. ರಾಜಾರಾಮ್ ತೋಳ್ಪಾಡಿ, ಡಾ. ಶ್ರೀಕುಮಾರ್, ಪ್ರೊ.ನೇಮಿರಾಜ್ ಶೆಟ್ಟಿ, ಡಾ.ಭ್ರಮರಿ ಶಿವಪ್ರಕಾಶ್, ಡಾ.ನಿರಂಜನ, ಡಾ. ಪ್ರಭಾಕರ ಮಲ್ಯ ಮುಂತಾದವರಿದ್ದರು.