ಗೋಪಾಲಾಚಾರ್ 'ಪ್ರಾಚ್ಛವಿದ್ಯಾವಿಶಾರದ'
Tuesday, April 1, 2025
ಲೋಕಬಂಧು ನ್ಯೂಸ್
ಉಡುಪಿ: ಒರಿಸ್ಸಾದ ಪುರಿ ಕ್ಷೇತ್ರದಲ್ಲಿ ಭಾರತ ಸರ್ಕಾರದ ಅಧೀನದ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ನವದೆಹಲಿ ಹಾಗೂ ಲೋಕಭಾಷಾ ಪ್ರಚಾರ ಸಮಿತಿ ಸಂಯುಕ್ತ ಆಶ್ರಯದಲ್ಲಿ ನಡೆದ ಮೂರು ದಿನಗಳ ಅಂತಾರಾಷ್ಟ್ರೀಯ ಸಂಸ್ಕೃತ ಸಮ್ಮೇಳನದಲ್ಲಿ ಪ್ರಾಚೀನ ಗ್ರಂಥಗಳ ಸಂರಕ್ಷಣೆ ಮತ್ತು ಸಂಶೋಧನಾ ಕಾರ್ಯ ಹಿನ್ನಲೆಯಲ್ಲಿ ಉಡುಪಿ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಡಾ.ಬಿ.ಗೋಪಾಲಾಚಾರ್ಯ ಅವರನ್ನು `ಪ್ರಾಚ್ಛವಿದ್ಯಾವಿಶಾರದ' ಪ್ರಶಸ್ತಿ ನೀಡಿ ಗೌರವಿಸಲಾಯಿತು.ಗೋಪಾಲ ಆಚಾರ್ಯ ಅವರು ಪುತ್ತಿಗೆ ಮಠದ ಅಧೀನದ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದಿಂದ ವಿಶೇಷ ಯೋಜನೆ ಹಮ್ಮಿಕೊಂಡಿದ್ದು, ಅದರ ಭಾಗವಾಗಿ ದೇಶದ ವಿವಿಧ ಭಾಗಗಳಲ್ಲಿ ಗ್ರಂಥ ಸಂರಕ್ಷಣೆ ಮತ್ತು ಪ್ರಾಚೀನ ಇತಿಹಾಸಗಳ ಅನ್ವೇಷಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ಸಾಧನೆಯನ್ನು ಗುರುತಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ವದ್ವೃಂದ ಹೊಂದಿದ ಸಮಿತಿ ನಿರ್ಣಯದಂತೆ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಶ್ರೀ ಸದಾಶಿವ ಪರಿಸರದಲ್ಲಿ ಮಾ. 29ರಿಂದ 31ರ ವರೆಗೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಒರಿಸ್ಸಾದ ಸಂಸ್ಕೃತ ಸಂಶೋಧಕ ವಿದ್ವಾಂಸ ಡಾ. ವಿಪಿನ ವಿಹಾರೀ ಶತಪಥಿ, ಲೋಕಭಾಷಾ ಪ್ರಚಾರ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಪ್ರೊ. ಸದಾನಂದ ದೀಕ್ಷಿತ್, ನೇಪಾಳ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಕಾಶೀನಾಥ ನ್ಯೌಪಾನೆ, ಅಸ್ಸಾಮಿನ ಕುಮಾರಭಾಸ್ಕರ ವರ್ಮಾ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ಗೋಕುಲೇಂದ್ರ ನಾರಾಯಣದೇವ ಗೋಸ್ವಾಮಿ, ಉತ್ಕಲ ಪ್ರಾಂತ್ಯದ ಸಂಸ್ಕೃತ ವಿದ್ವಾಂಸ ಪ್ರೊ. ಅರುಣ್ ತ್ರಿಪಾಠಿ, ಬಿಹಾರ ಜಯಪ್ರಕಾಶ ನಾರಾಯಣ್ ವಿಶ್ವವಿದ್ಯಾಲಯದ ಹಿರಿಯ ಸಂಸ್ಕೃತ ವಿದ್ವಾಂಸ ಪ್ರೊ. ವೈದ್ಯನಾಥ ಮಿಶ್ರಾ ಇದ್ದರು.
ಸಮ್ಮೇಳನದಲ್ಲಿ ದೇಶ ವಿದೇಶಗಳ ಸುಮಾರು ಮುನ್ನೂರಕ್ಕೂ ಅಧಿಕ ವಿದ್ವಾಂಸರು ಭಾಗವಹಿಸಿದ್ದರು.