ಕಲೆಯಿಂದ ಬದುಕು ಅರ್ಥಪೂರ್ಣ
Monday, April 14, 2025
ಲೋಕಬಂಧು ನ್ಯೂಸ್
ಉಡುಪಿ: ಬದುಕನ್ನು ಅರ್ಥಪೂರ್ಣಗೊಳಿಸುವಲ್ಲಿ, ಬದುಕಿಗೊಂದು ಉದ್ದೇಶ ಕಲ್ಪಿಸಿಕೊಳ್ಳುವಲ್ಲಿ ಸಂಗೀತ, ನೃತ್ಯ, ಚಿತ್ರಕಲೆ, ಮಂಡಲಕಲೆ, ಯಕ್ಷಗಾನ, ಸಾಹಿತ್ಯ, ಕವನ ರಚನೆ, ಫೊಟೋಗ್ರಫಿ, ನಾಟಕ ಮುಂತಾದ ಕಲೆಗಳು ಮುಖ್ಯ ಪಾತ್ರ ವಹಿಸುತ್ತವೆ. ಕಲಾ ಮನಸ್ಸಿನಿಂದಷ್ಟೆ ಶಾಂತಿ ಸಮಾಧಾನದ ಸಮಾಜ ನಿರ್ಮಾಣ ಸಾಧ್ಯ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಚಿಕ್ಕ ವಯಸ್ಸಿನಿಂದಲೇ ಕಲಾ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಮನೋವೈದ್ಯ, ಲೇಖಕ ಡಾ. ವಿರೂಪಾಕ್ಷ ದೇವರಮನೆ ಹೇಳಿದರು.ಇಂದ್ರಾಳಿ ಕಲಾ ತಪಸ್ ಸಂಗೀತ ಪಾಠಶಾಲೆ ಮಕ್ಕಳಿಗಾಗಿ ಆಯೋಜಿಸಿರುವ ಕಲಾ ಕೌಶಲ್ಯ ಎಂಟು ದಿನಗಳ ಕಲಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಹೆ ಮಣಿಪಾಲ ಗಾಂಧಿಯನ್ ಸೆಂಟರ್ ಮುಖ್ಯಸ್ಥ ಪ್ರೊ. ವರದೇಶ ಹಿರೇಗಂಗೆ ಮಕ್ಕಳು ಎಲ್ಲವನ್ನು ಅರಿಯುವ, ನೋಡುವ, ಅನುಭವಿಸುವ ಕುತೂಹಲ ಸೃಜನಶೀಲತೆ ಹೆಚ್ಚಿಸುತ್ತದೆ. ಮಗುವಿನ ದೃಷ್ಟಿಯಲ್ಲಿ ಜಗತ್ತನ್ನು ಕಾಣವಂತಾಗಬೇಕು. ಆಗ ಸುಂದರ ಶಾಂತ ಬದುಕು ಮತ್ತು ಜಗತ್ತು ಸೃಷ್ಟಿಯಾಗುತ್ತದೆ. ಕಲಾ ಶಿಬಿರಗಳು ಮಕ್ಕಳಲ್ಲಿ ಕಲಾ ಮನಸ್ಸನ್ನು ಉದ್ದೀಪನಗೊಳಿಸುವಲ್ಲಿ ಸಹಕಾರಿ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ ಮತ್ತು ರೋಟರಿ ಉಡುಪಿಯ ಅಧ್ಯಕ್ಷ ಗುರುರಾಜ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ಶುಭ ಹಾರೈಸಿದರು.
ಕಲಾ ತಪಸ್ ನಿರ್ದೇಶಕಿ ಶ್ರಾವ್ಯಾ ಎಸ್. ಬಾಸ್ರಿ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸುಬ್ರಹ್ಮಣ್ಯ ಬಾಸ್ರಿ ಶಿಬಿರದ ಉದ್ದೇಶ ಮತ್ತು ಶಿಬಿರದಲ್ಲಿ ಅಳವಡಿಸಿಕೊಂಡ ವಿವಿಧ ಕಲಾ ಮಾಧ್ಯಮಗಳತ್ತ ಬೆಳಕು ಚೆಲ್ಲಿದರು.
ಶಿಬಿರ ಉಪವ್ಯವಸ್ಥಾಪಕಿ ಮಾನಸ ವಂದಿಸಿದರು. ಹೇಮಂತ್ ಯು. ಕಾಂತ್ ನಿರೂಪಿಸಿದರು.
ಶಿಬಿರದಲ್ಲಿ ಪ್ರತಿದಿನ ಸುಗಮ ಸಂಗೀತ (ಗಾನಕಲಾರತ್ನ ಎಮ್. ಎಸ್. ಗಿರಿಧರ್, ಬೆಂಗಳೂರು) ಯೋಗ ಮತ್ತು ಪ್ರಾಣಾಯಾಮ (ಯೋಗ ಗುರು ಪಿ. ವಿ. ಭಟ್) ಯಕ್ಷಗಾನ (ಗುರು ಬನ್ನಂಜೆ ಸಂಜೀವ ಸುವರ್ಣ), ಮಂಡಲ ಕಲೆ (ಶ್ರಾವ್ಯಾ ಎಸ್. ಬಾಸ್ರಿ) ರಂಗಭೂಮಿ (ಅಭಿನವ ಗ್ರೋವರ್) ಕ್ಯಾಲಿಗ್ರಫಿ (ಅಪರ್ಣಾ ಯು., ಮೈಸೂರು) ತರಬೇತಿ ನೀಡಲಾಗುತ್ತದೆ.
ಜೊತೆಗೆ ಪರಿಣತ ವಿಷಯ ತಜ್ಞರಾದ ರಾಜೇಂದ್ರ ಭಟ್, ರಾಷ್ಟ್ರೀಯ ತರಬೇತುದಾರ (ಸಂಗೀತ ಪರಂಪರೆ ಮತ್ತು ಕಲಾಪಯಣ),ವೆಂಕಿ ಪಲಿಮಾರ್ (ಭುವಿ ಮತ್ತು ಕಲೆ - ಆವೆ ಮಣ್ಣಿನ ಕಲಾಕೃತಿ), ಡಾ. ಭ್ರಮರಿ ಶಿವಪ್ರಕಾಶ್ (ಕಲೆ ಮತ್ತು ಸೌಂದರ್ಯ), ಡಾ. ಜನಾರ್ದನ ಹಾವಂಜೆ, ಕಲಾವಿದರ-ಸಂಶೋಧಕ (ಮುಖವಾಡ ಮತ್ತು ಮುಖವರ್ಣಿಕೆ), ಸುಮನ ಆಚಾರ್ಯ ಉಡುಪಿ (ಸಾಂಪ್ರದಾಯಿಕ ವಿನೋದದಾಟಗಳಲ್ಲಿ ಆತ್ಮಾನಂದ) ಮತ್ತು ಹರೀಶ ಕುಮಾರ್ (ಪರಿಸರ ಸಮತೋಲನದಲ್ಲಿ ಹಾವುಗಳು) ವಿಶೇಷ ಉಪನ್ಯಾಸ ಅಳವಡಿಸಿಕೊಳ್ಳಲಾಗಿದೆ.